ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ತಿಂಗಳು ಬೇಸಿಗೆ ಇರಲಿದ್ದು,ಈ ವರ್ಷ ಗರಿಷ್ಠ ಉಷ್ಣಾಂಶ ಸಾಮಾನ್ಯ ಅಥವಾ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇರಬಹುದು. ಆದರೆ, ಉ.ಕರ್ನಾಟಕ ಜಿಲ್ಲೆಗಳಲ್ಲಿ 42 ಡಿಗ್ರಿ ಸೆಂಟಿಗ್ರೇಡ್ವರೆಗೂ ತಾಪಮಾನ ಏರಲಿದೆ. ಉಳಿದೆಡೆ ಬಿಸಿಲು, ಸೆಕೆ ಕಡಿಮೆ ಇರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರಾದೇಶಿಕ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ, ಮಾರ್ಚ್1 ರಿಂದ ಮೇ 31 ರವರೆಗೆ ಸೆಕೆ ಇರುತ್ತದೆ. ಈ ವರ್ಷ ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ. ಆದರೆ, ಕನಿಷ್ಠ ಉಷ್ಣಾಂಶ, ಸಾಮಾನ್ಯ ಮಟ್ಟಕ್ಕಿಂತಲೂ ಸ್ವಲ್ಪ ಮಟ್ಟಿಗೆ ಹೆಚ್ಚಿಗೆಯಾಗಲಿದೆ ಎಂದರು.
ಬೀದರ್, ಗುಲ್ಬರ್ಗಾ, ಕಲಬುರ್ಗಿ, ಬಿಜಾಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಗದಗ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಿಗೆ ಇರಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕು. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೆಚ್ಚು ಬಿಸಿಲಿರುವುದರಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು ಎಂದು ಎಚ್ಚರಿಸಿದ್ದಾರೆ.