ಬೆಂಗಳೂರು: ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷರಾಗಿದ್ದ ಮಾತೆ ಮಹಾದೇವಿಯವರ ಪಾರ್ಥಿವ ಶರೀರವನ್ನು ರಾಜಾಜಿನಗರದ ಬಸವ ಮಂಟಪದಿಂದ ಅವರ ಹುಟ್ಟೂರಾದ ಚಿತ್ರದುರ್ಗಕ್ಕೆ ಸಾರ್ವಜನಿಕ ದರ್ಶನಕ್ಕೆಂದು ತೆಗೆದುಕೊಂಡು ಹೋಗಲಾಯಿತು.
ಚಿತ್ರದುರ್ಗದ ಬಳಿಕ ರಾತ್ರಿ ವೇಳೆಗೆ ಕೂಡಲಸಂಗಮದಲ್ಲಿ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಹಾಗಾಗಿ ಲಕ್ಷಾಂತರ ಭಕ್ತರು ಕೂಡಲಸಂಗಮದಲ್ಲಿ ಸೇರುವ ಸಾಧ್ಯತೆ ಇದೆ. ಪಾರ್ಥಿವ ಶರೀರದ ರವಾನೆಗೂ ಮೊದಲು ಲಿಂಗಾಯತ ಧ್ವಜ ಹಾರಿಸುವ ಮೂಲಕ ಧ್ವಜ ವಂದನೆ ಮಾಡಿ, ಬಸವತತ್ವದ ಬೋಧನೆ ಮಾಡಲಾಯಿತು. ಬಳಿಕ ಗೃಹ ಸಚಿವ ಎಂ.ಬಿ.ಪಾಟೀಲರು ಭೇಟಿ ನೀಡಿ ಮತ್ತೊಮ್ಮೆ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಮಾತೆ ಮಹಾದೇವಿಯವರ ಪಾರ್ಥಿವ ಶರೀರ ಗಾಜಿನ ವಾಹನದ ಮೂಲಕ ಮಾತೆ ಮಹಾದೇವಿಯವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ನೆರೆದಿದ್ದ ಬಸವ ಶರಣರು ಬಿಕ್ಕಿ ಬಿಕ್ಕಿ ಅಳುತ್ತಾ, ನೋವಿನ ವಿದಾಯ ಹೇಳಿದರು. ಇನ್ನಷ್ಟು ಮಂದಿ ಮಾತೆ ಮಹದೇವಿಯವರ ಪಾರ್ಥಿವ ಶರೀರದ ಮೆರವಣಿಗೆಯೊಂದಿಗೆ ಚಿತ್ರದುರ್ಗಕ್ಕೆ ಸಾಗಿದರು.
ಬೆಳಗ್ಗೆಯಿಂದಲೇ ಭಕ್ತರು ಸೇರಿದಂತೆ ಗಣ್ಯ ವ್ಯಕ್ತಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿದರು. ವಿರೋಧ ಪಕ್ಷದ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಮೇಯರ್ ಗಂಗಾಂಬಿಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಬಿಎಸ್ವೈ, ಗುರುವಾಗಿ, ಸಾಹಿತಿಯಾಗಿ, ಲಿಂಗಾಯತ ಧರ್ಮದ ಏಳಿಗೆಗೆ ಶ್ರಮಿಸಿ ಹೋರಾಟಗಳನ್ನು ಮಾಡಿ ಸಾರ್ಥಕ ಜೀವನವನ್ನು ನಡೆಸಿದ ಮಾತೆ ಮಹಾದೇವಿಯವರನ್ನು ಕಳೆದುಕೊಂಡದ್ದು ಬೇಸರ ತಂದಿದೆ. ಅವರ ಭಕ್ತರಿಗೆ ದುಃಖ ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದರು.