ಬೆಂಗಳೂರು: ಜಮೀನು ಹಂಚಿಕೆ ಷರತ್ತುಗಳನ್ನು ಉಲ್ಲಂಘಿಸಿರುವ ಮಾತಾ ಅಮೃತಾನಂದಮಯಿ ಟ್ರಸ್ಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸುವ ಬದಲು ನಿಯಮಗಳನ್ನೇ ಬದಲಿಸಿರುವ ಸರ್ಕಾರದ ನಡೆಗೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಗರದ ವರ್ತೂರು ಹೋಬಳಿಯ ಕಸವನಹಳ್ಳಿಯಲ್ಲಿ ಸರ್ಕಾರದಿಂದ ಪಡೆದ ಜಮೀನನ್ನು ಮಾತಾ ಅಮೃತಾನಂದಮಯಿ ಟ್ರಸ್ಟ್ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಕವಿತಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ಈ ವೇಳೆ ಟ್ರಸ್ಟ್ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ ಸರ್ಕಾರ ಭೂಮಿ ಹಂಚಿಕೆ ನಿಯಮಗಳನ್ನು ಪರಿಷ್ಕರಿಸಿದೆ ಎಂದರು. ವರದಿ ಪರಿಶೀಲಿಸಿದ ಪೀಠ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಹಿಂದಿನ ವಿಚಾರಣೆ ಸಂದರ್ಭದಲ್ಲಿ ಸರ್ಕಾರವೇ ಟ್ರಸ್ಟ್ ನಿಯಮ ಉಲ್ಲಂಘಿಸಿದೆ ಎಂದು ಹೇಳಿತ್ತು. ಅದರಂತೆ ನ್ಯಾಯಾಲಯ ಏಪ್ರಿಲ್ 23ರಂದು ಟ್ರಸ್ಟ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಆದೇಶಿಸಿದೆ. ಆದರೆ, ಕಂದಾಯ ಇಲಾಖೆ ಏಪ್ರಿಲ್ 29ರಂದು ಭೂಮಿ ಹಂಚಿಕೆಯ ಷರತ್ತುಗಳನ್ನೇ ಬದಲಿಸಿದೆ, ಇದು ನಿಜಕ್ಕೂ ಅಚ್ಚರಿಯ ಬೆಳವಣಿಗೆ ಎಂದಿತು.
ಅಲ್ಲದೇ, ನ್ಯಾಯಾಲಯ ಕಾನೂನು ಕ್ರಮಕ್ಕೆ ಆದೇಶಿಸಿದ ಬಳಿಕ ಸರ್ಕಾರ ಈ ರೀತಿ ಷರತ್ತುಗಳನ್ನು ಸಡಿಲಿಕೆ ಮಾಡಿರುವುದು ಕೋರ್ಟ್ ಆದೇಶ ಮೀರಿ ನಡೆದುಕೊಂಡಿರುವುದನ್ನು ತಿಳಿಸುತ್ತದೆ. ಹೀಗಾಗಿ, ನ್ಯಾಯಾಲಯದ ಗಮನಕ್ಕೆ ತರದೇ ಜಮೀನು ಹಂಚಿಕೆ ಷರತ್ತುಗಳನ್ನು ಬದಲಿಸಿದ್ದು ಹೇಗೆ ಮತ್ತು ಏಕೆ ಎಂಬ ಕುರಿತು ಮುಂದಿನ ಒಂದು ವಾರದೊಳಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿವರಣೆ ನೀಡಬೇಕು ಎಂದು ತಾಕೀತು ಮಾಡಿ, ವಿಚಾರಣೆ ಮುಂದೂಡಿತು.