ಕರ್ನಾಟಕ

karnataka

ETV Bharat / state

ಸೇಫ್ಟಿ ಜಾಕೆಟ್ ಧರಿಸದಿರುವುದೇ ಮಾಸ್ತಿಗುಡಿ ಸಿನಿಮಾ ದುರಂತಕ್ಕೆ ಕಾರಣ: ರವಿವರ್ಮಾ ಪರ ವಕೀಲ - Mastigudi movie disaster

ಪ್ರೇಕ್ಷಕರು ಸಿಕ್ಸ್ ಪ್ಯಾಕ್ ಕಣ್ತುಂಬಿಕೊಳ್ಳಲಿ ಎನ್ನುವ ಕಾರಣಕ್ಕೆ ಸೇಫ್ಟಿ ಜಾಕೆಟ್ ಧರಿಸದಿರುವುದು ಮಾಸ್ತಿಗುಡಿ ಸಿನಿಮಾ ದುರಂತ ಸಂಭವಿಸಿದೆ ಎಂದು ರವಿವರ್ಮಾ ಪರ ವಕೀಲರು ವಾದ ಮಂಡಿಸಿದರು.

Mastigudi movie disaster
ಮಾಸ್ತಿಗುಡಿ ಸಿನಿಮಾ ದುರಂತ

By

Published : Apr 27, 2023, 11:06 PM IST

ಬೆಂಗಳೂರು:ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಲನಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಸಂಭವಿಸಿದ ದುರಂತದಲ್ಲಿ ಸಾವನಪ್ಪಿದ ಯುವ ನಟರಾದ ಉದಯ್ ಹಾಗೂ ಅನಿಲ್ ಅವರು, ತಮ್ಮ ಸಿಕ್ಸ್ ಪ್ಯಾಕ್ ಪ್ರೇಕ್ಷಕರು ನೋಡಬೇಕೆಂಬ ಕಾರಣದಿಂದ ಸೇಫ್ಟಿ ಜಾಕೆಟ್ ಧರಿಸಲು ನಿರಾಕರಿಸಿದ್ದರು ಎಂಬ ಕುತೂಹಲಕಾರಿ ಅಂಶವನ್ನು ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನ್ಯಾಯಾಧೀಶ ಎಸ್.ಶ್ರೀಧರ್​ ಅವರಿಂದ ವಿಚಾರಣೆ: ತಮ್ಮ ವಿರುದ್ಧದ ಇಬ್ಬರು ಯುವ ಖಳನಟರ ಉದ್ದೇಶಪೂರ್ವಕವಲ್ಲದ ಹತ್ಯೆ ಆರೋಪವನ್ನು ಕೈಬಿಡುವಂತೆ ಕೋರಿ ಸಾಹಸ ನಿರ್ದೇಶಕ ರವಿವರ್ಮ ಸಲ್ಲಿಸಿದ್ದ ಅರ್ಜಿ ನಗರದ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಶ್ರೀಧರ್ ಅವರ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ರವಿವರ್ಮ ಪರ ವಾದ ಮಂಡಿಸಿದ ವಕೀಲ ಸಿ.ಎಚ್. ಹನುಮಂತರಾಯ ಅವರು 'ಖಳನಟರಿಬ್ಬರ ಸಾವು ಆಕಸ್ಮಿಕವಾಗಿ ಸಂಭವಿಸಿದೆ. ಹೆಲಿಕಾಪ್ಟರ್‌ನಿಂದ ಜಲಾಶಯದ ಹಿನ್ನೀರಿಗೆ ಧುಮುಕುವ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಮ್ಮ ದೇಹದ ಸಿಕ್ಸ್ ಪ್ಯಾಕ್ ಅನ್ನು ಪ್ರೇಕ್ಷಕರು ನೋಡಲು ಅನುವು ಮಾಡಿಕೊಳ್ಳುವಂತೆ ಕೇಳಿಕೊಂಡು ಸೇಫ್ಟಿ ಜಾಕೆಟ್ (ರಕ್ಷಾ ಕವಚ) ಧರಿಸಲು ನಟರಿಬ್ಬರೂ ಒಪ್ಪಿರಲಿಲ್ಲ. ಹಾಗೆಯೇ, ತಮಗೆ ಈಜು ಬರುವುದಾಗಿಯೂ ತಿಳಿಸಿದ್ದರು. ಅವರ ಒಪ್ಪಿಗೆ ಮೇರೆಗೆ ಚಿತ್ರೀಕರಣ ನಡೆಸಲಾಗಿತ್ತು. ಈ ಅಂಶ ಪೋಲಿಸರೇ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ ನ್ಯಾಯಾಲಯಕ್ಕೆ ವಿವರಿಸಿದರು.

ಮೇ 30ಕ್ಕೆ ವಿಚಾರಣೆ ನಿಗದಿ:ಅಲ್ಲದೆ, ಈಜು ಬರುವುದಾಗಿ ಹೇಳಿದ್ದರೂ ಮೃತರ ಹಿತ ದೃಷ್ಟಿ ಗಮನದಲ್ಲಿರಿಸಿಕೊಂಡು ಚಿತ್ರೀಕರಣದ ವೇಳೆ ಅರ್ಜಿದಾರರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಈಜುಗಾರರು ಮತ್ತು ಮೋಟಾರ್ ಬೋಟ್ ಅನ್ನು ಸ್ಥಳದಲ್ಲಿ ಸಿದ್ಧವಾಗಿರಿಸಿಕೊಳ್ಳಲಾಗಿತ್ತು. ಆದರೆ, ಮೋಟಾರ್ ಬೋಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ, ಅದು ನೀರಿನಲ್ಲಿ ಖಳನಾಯಕರು ಬಿದ್ದ ಜಾಗಕ್ಕೆ ತಲುಪಲು ಸಾಧ್ಯವಾಗದಿದ್ದರಿಂದ ದುರಂತ ಸಂಭವಿಸಿದೆ. ಇದನ್ನು ಅರ್ಜಿದಾರರು ಸೇರಿದಂತೆ ಪ್ರಕರಣದ ಯಾವೊಬ್ಬ ಆರೋಪಿಯೂ ನಿರೀಕ್ಷಿಸಿರಲಿಲ್ಲ. ಹಾಗಾಗಿ ಅರ್ಜಿದಾರರು ಉದ್ದೇಶಪೂರ್ವಕವಾಗಿ ಯಾವುದೇ ಶಿಕ್ಷಾರ್ಹ ಅಪರಾಧ ಎಸಗಿಲ್ಲ. ಅವರ ವಿರುದ್ಧದ ಆರೋಪ ಕೈಬಿಡಬೇಕು ಎಂದು ಕೋರಿದರು. ನ್ಯಾಯಾಲಯವು ಹೆಚ್ಚಿನ ವಾದ ಮಂಡನೆಗೆ ಮೇ 30ಕ್ಕೆ ವಿಚಾರಣೆ ನಿಗದಿಪಡಿಸಿದೆ.

ದೋಷಾರೋಪಣಾ ಪಟ್ಟಿ: ಮಾಸ್ತಿಗುಡಿ ಚಲನಚಿತ್ರದ ಸಾಹಸದೃಶ್ಯ ಚಿತ್ರೀಕರಣದ ಭಾಗವಾಗಿ 2016ರ ನವೆಂಬರ್ 7ರಂದು ಖಳನಟರಾದ ಉದಯ್ ಹಾಗೂ ಅನಿಲ್, ನಾಯಕ ನಟ ದುನಿಯಾ ವಿಜಯ್ ಜೊತೆಯಲ್ಲಿ ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಧುಮುಕಿದ್ದರು. ಆದರೆ, ಈಜಿ ದಡ ಸೇರಲು ಸಾಧ್ಯವಾಗದೇ ಖಳ ನಟರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ತಾವರೆಕೆರೆ ಪೊಲೀಸರು, ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ಹಾಗೂ ಇತರೆ ಐವರ ವಿರುದ್ಧ ಐಪಿಸಿ ಸೆಕ್ಷನ್ 304ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ:ಮೀನುಗಾರರಿಗೆ ದೊರೆಯಲಿದೆ 10 ಲಕ್ಷ ರೂ. ವಿಮೆ, ಲೀಟರ್ ಡೀಸೆಲ್‌ಗೆ 25 ರೂ. ಸಬ್ಸಿಡಿ: ರಾಹುಲ್ ಗಾಂಧಿ ಭರವಸೆ

ABOUT THE AUTHOR

...view details