ಬೆಂಗಳೂರು :ರಾಜ್ಯದ ಎ ಗ್ರೇಡ್ನ 25 ದೇವಸ್ಥಾನಗಳನ್ನು ಪೈಲಟ್ ಪ್ರಾಜೆಕ್ಟ್ ಅಡಿಯಲ್ಲಿ ತೆಗೆದುಕೊಂಡಿದ್ದೇವೆ. ಮಾಸ್ಟರ್ ಪ್ಲ್ಯಾನ್ ಮಾಡಿ ಅಭಿವೃದ್ಧಿ ಮಾಡಲು ನಿರ್ಧಾರ ಮಾಡಲಾಗಿದೆ.
'ದೈವ ಸಂಕಲ್ಪ' ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಉದ್ದೇಶಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆಯಲ್ಲಿ ಬಹಳಷ್ಟು ಕಡೆ ಐತಿಹಾಸಿಕ ಹಿನ್ನೆಲೆ ಇರುವ ದೇವಸ್ಥಾನಗಳಿವೆ. ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.
ಇಲಾಖೆ ಜವಾಬ್ದಾರಿ ತೆಗೆದುಕೊಂಡ ಬಳಿಕ, ಸಿಎಂ ಜೊತೆ ಚರ್ಚಿಸಿ 25 ಲಕ್ಷ ರೂ. ಮೇಲೆ ಆದಾಯ ಬರುವ ಎ ಗ್ರೇಡ್, ಅದರ ಕೆಳಗಿನ ಆದಾಯ ಇರುವ ಬಿ ಮತ್ತು 5 ಲಕ್ಷ ರೂ. ಕೆಳಗೆ ಆದಾಯ ಇರುವ ದೇವಸ್ಥಾನ ಸಿ ಗ್ರೇಡ್ ಎಂದು ಗುರುತಿಸಲಾಗಿದೆ.
'ದೈವ ಸಂಕಲ್ಪ' ಯೋಜನೆ ಕುರಿತಂತೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿರುವುದು.. ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ಕ್ಷೇತ್ರ ಅಭಿವೃದ್ಧಿ ಮಾಡಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕಾರ್ಯಕ್ರಮ ಮಾಡಲಿದ್ದೇವೆ. 10 ರಿಂದ 15 ಎ ಗ್ರೇಡ್ ದೇವಸ್ಥಾನ ನೋಡಿದಾಗ ಮಲೆಮಹದೇಶ್ವರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪರಿಶೀಲನೆ ಮಾಡಿದ್ದೇನೆ.
ಬರುವ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ, ರಸ್ತೆ, ಕುಡಿಯುವ ನೀರು, ಒಳಗೆ ಪ್ರಸಾದ, ಅಭಿಷೇಕಕ್ಕೆ ಬಳಸುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳುವುದು. ಬಸ್ ನಿಲ್ದಾಣ, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು.
ಬರುವ ಭಕ್ತರಿಗೆ ಸ್ನಾನಘಟ್ಟ, ಉತ್ತಮ ಶೌಚಾಲಯದ ವ್ಯವಸ್ಥೆ ಮಾಡಲು ತೀರ್ಮಾನ ಮಾಡಲಾಗಿದೆ. ಭಕ್ತರು ಸಮಾಧಾನಕರವಾಗಿ ಪೂಜೆ ಮಾಡಲು ಯೋಜನೆ ರೂಪಿಸಲಾಗಿದೆ. ಅಂದಾಜು ₹1,140 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮುಜರಾಯಿ ಇಲಾಖೆಗೆ 168 ಕೋಟಿ ರೂ. ಹಣ :ರಾಜ್ಯದಲ್ಲಿ ಸಿ ಗ್ರೇಡ್ನ 34 ಸಾವಿರ ದೇವಸ್ಥಾನಗಳು ಇವೆ. ದೇವಸ್ಥಾನಕ್ಕೆ ಆದಾಯ ಹೆಚ್ಚಳ ಮಾಡಿ, ಅರ್ಚಕರಿಗೆ ವ್ಯವಸ್ಥೆ ಮಾಡಲಾಗುತ್ತದೆ. 31 ಜಿಲ್ಲೆಯ ಡಿಸಿಗಳಿಗೆ ಪತ್ರ ಬರೆದು, ಜಿಲ್ಲೆಯಲ್ಲಿರುವ ಸಿ ಗ್ರೇಡ್ ದೇವಸ್ಥಾನ ಪಟ್ಟಿ ನೀಡಲು ಸೂಚನೆ ನೀಡಲಾಗಿದೆ.
ಭಕ್ತಾದಿಗಳ ಮೂಲಕ ಆ ದೇವಸ್ಥಾನ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಗಳು ಮುಜರಾಯಿ ಇಲಾಖೆಗೆ 168 ಕೋಟಿ ರೂ., 19 ಕೋಟಿ ರೂ. ಹಣ ನೀಡಿದ್ದು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಭೂಮಿ ಕೇಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪತ್ರ ವ್ಯವಹಾರ ನಡೆದಿದೆ. ಪ್ರತಿಯೊಂದು ಕಡೆಯ ಯಾತ್ರಿ ನಿವಾಸ ಆಗಬೇಕೆಂದು ಚಿಂತನೆ ನಡೆದಿದೆ. ನಾನೂ ಅಲ್ಲಿಗೆ ಹೋಗಬೇಕಿತ್ತು. ಅಧಿವೇಶನ ಮುಗಿದ ನಂತರ ಅಯೋಧ್ಯೆಗೆ ಭೇಟಿ ಕೊಡುವುದಾಗಿ ಹೇಳಿದರು.
ದೇವಸ್ಥಾನ ಖಾಸಗೀಕರಣ ಇಲ್ಲ: ದೇವಸ್ಥಾನಕ್ಕೆ ಸ್ವಾಯತ್ತತೆ ನೀಡುವ ವಿಚಾರ ಸಂಬಂಧ ಮಾತನಾಡಿದ ಸಚಿವರು, ಖಾಸಗೀಕರಣ ಇದರಲ್ಲಿ ಇಲ್ಲ. ಅದು ತಪ್ಪು ಕಲ್ಪನೆ. ಸ್ವಾಯತ್ತತೆ ನೀಡಿ, ಸಮಗ್ರ ಅಭಿವೃದ್ಧಿ ನೀಡಬೇಕು. ಹಾಗಾಗಿ, ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಭಕ್ತರಿಗೆ ಅನುಕೂಲ ಮಾಡಿ ಕೊಡಲು ಈ ಯೋಜನೆ. ಈ ಸಂಬಂಧ ಧಾರ್ಮಿಕ ಪ್ರಮುಖರ ಜೊತೆ ಚರ್ಚೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ:ಬೆಂಗಳೂರಲ್ಲಿ ಪತ್ನಿ ವಿನಿಮಯ ದಂಧೆಗೆ ಟ್ವಿಟರ್ ಮೂಲಕ ಆಹ್ವಾನ; ಪತ್ನಿಯ ವಿಡಿಯೋ ಮಾಡಿ ಶೇರ್ ಮಾಡೋ ಪತಿ!
ನಮ್ಮಲ್ಲೂ ಬೇರೆ ಕಡೆ ದೇವಸ್ಥಾನಕ್ಕೆ ಹೋಗುತ್ತೇವೆ. ಆಂಧ್ರದ ಶ್ರೀ ಶೈಲಂ, ತಿರುಪತಿಗೆ ಹೋಗುತ್ತಾರೆ. ಆಂಧ್ರದಲ್ಲಿರೋ ಶ್ರೀಶೈಲದಲ್ಲಿ ನಮ್ಮ ಒಡೆತನದ ಭೂಮಿ ಇದೆ. ಕಾವಾಡಿ ಇಡಲು ವ್ಯವಸ್ಥೆ ಮಡಲು ಸಿಎಂ ಬಳಿ ಚರ್ಚೆ ಮಾಡಿದ್ದೇವೆ.
ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿ 85 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಮಾಡಲು ಯೋಜನೆ ಆಗಿದೆ. ಮೊದಲ ಹಂತದಲ್ಲಿ 45 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಬರುವ ದಿನಗಳಲ್ಲಿ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಕಾಶಿ ಯಾತ್ರೆಗೆ ಪ್ರೋತ್ಸಾಹ ಧನ :ಚಾರ್ ಧಾಮ್ ಯಾತ್ರೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಶಿ ಯಾತ್ರೆ ಮಾಡುವವರಿಗೆ ಪ್ರೋತ್ಸಾಹ ಧನ ಹಾಗೂ 12 ಜ್ಯೋತಿರ್ಲಿಂಗ ದರ್ಶನ ಮಾಡುವವರಿಗೆ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ ಎಂದರು.
ತಸ್ತಿಕ್ ಹೆಚ್ಚಳಕ್ಕೆ ನಿರ್ಧಾರ :ತಸ್ತಿಕ್ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಸಿಎಂ ಈ ಬಗ್ಗೆ ಅಂತಿಮವಾದ ನಿರ್ಧಾರ ಮಾಡಲಿದ್ದಾರೆ. ಕಂದಾಯ ಸಚಿವರನ್ನು ಭೇಟಿ ಮಾಡಿದ್ದು, ಮುಜರಾಯಿ ಇಲಾಖೆ ಮತ್ತು ವಕ್ಫ್ ಆಸ್ತಿ ಸರ್ವೆ ಮಾಡಿಕೊಡಲು ಮನವಿ ಮಾಡಲಾಗಿದೆ. ಡ್ರೋಣ್ ಮೂಲಕ ಸರ್ವೆ ನಡೆಯಲಿದೆ ಎಂದರು.