ಬೆಂಗಳೂರು:ಜಾರ್ಖಂಡ್ ರಾಜ್ಯದ ಪರ್ವತದ ಮೇಲಿರುವ ಜೈನ ಸಮುದಾಯದ ಪವಿತ್ರ ಕ್ಷೇತ್ರವನ್ನು ಸಮ್ಮೇದ ಶಿರ್ಖಜಿ ಪ್ರವಾಸಿ ತಾಣವಾಗಿಸಲು ನಿರ್ಧರಿಸಿರುವ ಜಾರ್ಖಂಡ್ ಮತ್ತು ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಫ್ರೀಡಂ ಪಾರ್ಕ್ ಅವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಜೈನ ಸಮುದಾಯ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಧವಲಕೀರ್ತಿ ಸ್ವಾಮೀಜಿ, ಭಾನುಕೀರ್ತಿ ಸ್ವಾಮೀಜಿ, ಲಕ್ಷ್ಮೀಸೇನ ಭಟ್ಟರಕ ಸ್ವಾಮೀಜಿ, ಸಿದ್ದಾಂತಕೀರ್ತಿ ಸ್ವಾಮೀಜಿ ಮತ್ತು ಕರ್ನಾಟಕ ಜೈನ ಆಸೋಸಿಯೇಷನ್ ಅಧ್ಯಕ್ಷ ಪ್ರಸನ್ನಯ್ಯ ಸ್ವಾಮೀಜಿ, ಜೈನ ಸಮುದಾಯದ ಸಂಘಟನೆಗಳು, ಜೈನ ಪರಂಪರೆಯ ಆನುಯಾಯಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಜಾರ್ಖಂಡ್ ರಾಜ್ಯದಲ್ಲಿರುವ ಜೈನರ ಪರಮ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಜಂಟಿಯಾಗಿ ಪ್ರವಾಸಿ ತಾಣ ಎಂದು ಘೋಷಿಸಿದೆ. ಹಿಂದೂಗಳಿಗೆ ಕಾಶಿ, ಸಿಖ್ಖರಿಗೆ ಗುರುದ್ವಾರದಂತೆ ಜೈನ ಸಮುದಾಯಕ್ಕೆ ಅನಾದಿ ಕಾಲದಿಂದಲೂ ಪವಿತ್ರ ಕ್ಷೇತ್ರವಾಗಿರುವ ಸಮ್ಮೇದ ಶಿಖರ್ಜಿ ಇಪ್ಪತ್ತು ತೀರ್ಥಂಕರರ ಸಹಿತ ಅನೇಕಾನೇಕ ಕೇವಲಿಗಳು ಮುಕ್ತಿ ಹೊಂದಿದ ತಾಣವಾಗಿದೆ. ಈ ಕ್ಷೇತ್ರದ ದರ್ಶನ ಮಾಡಿದರೆ ಸಕಲ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆ ಜೈನರಿಗಿದೆ.