ಬೆಂಗಳೂರು: ಲೋಕ ಕಲ್ಯಾಣಕ್ಕಾಗಿ ನವರಾತ್ರಿಯ ಲಲಿತಾ ಪಂಚಮಿಯಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸೆ. 30ರಂದು ಹಿಂದೂ ಮಹಿಳೆಯರ ಸಮ್ಮುಖದಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಸಲು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದ್ದಾರೆ.
ಪ್ರತಿ ವರ್ಷದ ಆಶ್ವಯುಜ ಮಾಸದ ಮೊದಲ ದಿನ ಅಂದರೆ ಪಾಡ್ಯದಿಂದ ನವಮಿಯವರೆಗೆ (ನವರಾತ್ರಿ) ಶಕ್ತಿ ಸ್ವರೂಪಿಣಿಯವರಾದ ಜಗನ್ಮಾತೆಯರನ್ನು ಹಿಂದಿನಿಂದಲೂ ವಿಶೇಷವಾಗಿ ಆರಾಧಿಸುವುದು ಹಿಂದೂ ಧರ್ಮದಲ್ಲಿ ನಡೆಸಿಕೊಂಡು ಬರುತ್ತಿರುವ ಆಚರಣೆಯಾಗಿದೆ. ಸೆ. 30ರ ಶುಕ್ರವಾರವು ಲಲಿತಾ ಪಂಚಮಿ ವಿಶೇಷವಾಗಿದ್ದು, ಈ ದಿನದಂದು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಹಿಂದೂ ಮಹಿಳೆಯರನ್ನು ಬರಮಾಡಿಕೊಂಡು ಸಾಮೂಹಿಕ ಕುಂಕುಮಾರ್ಚನೆಯನ್ನು ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ನೆರವೇರಿಸುವಂತೆ ಸೂಚಿಸಲಾಗಿದೆ.
ಸೆಪ್ಟೆಂಬರ್ 30ರಂದು ಸಾಮೂಹಿಕ ಕುಂಕುಮಾರ್ಚನೆ ನಡೆಸಲು ಕಾರಣಾಂತರಗಳಿಂದ ಸಾಧ್ಯವಾಗದಿದ್ದರೆ ಅಕ್ಟೋಬರ್ 3ರ ಸೋಮವಾರ ದುರ್ಗಾಷ್ಠಮಿಯಂದು ಈ ಕಾರ್ಯಕ್ರಮವನ್ನು ನಡೆಸಬೇಕು. ಈ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಅಧಿಕಾರಿಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.