ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಭೀತಿ ಸೃಷ್ಟಿಸಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸದ್ಯ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯವಿಲ್ಲ. ಅದರಂತೆ ಶಾಲಾ, ಕಾಲೇಜುಗಳಲ್ಲಿಯೂ ಮಾಸ್ಕ್ ಕಡ್ಡಾಯ ಮಾಡುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಮಾಸ್ಕ್ ಕಡ್ಡಾಯ ಇಲ್ಲ, ಕೇವಲ ಆಯ್ಕೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಜನದಟ್ಟಣೆ ವ್ಯಾಪ್ತಿಯಲ್ಲಿ ನಿಯಮ ಅನ್ವಯಿಸುತ್ತದೆ. ಕೋವಿಡ್ ಹೊಸ ರೂಪಾಂತರಿ ಪ್ರಕರಣಗಳು ವರದಿಯಾಗಿರುವ ಕಾರಣ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ. ಇಲಾಖೆ ಮಕ್ಕಳ ಹಿತಕ್ಕೆ ಮೊದಲ ಆದ್ಯತೆ ನೀಡಲಿದೆ. ಆದರೆ ಮಕ್ಕಳಿಗೆ ಮಾಸ್ಕ್ ಕಡ್ಡಾಯದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದರು.
ಓಮಿಕ್ರಾನ್ನ ಉಪ ತಳಿ ಪ್ರಕರಣಗಳು ಕೇರಳ ಸೇರಿದಂತೆ ಬೇರೆ ರಾಜ್ಯದಲ್ಲಿ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಏನೆಲ್ಲಾ ಕ್ರಮ ವಹಿಸಬೇಕು ಎನ್ನುವ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ನಿರ್ಧಾರಕ್ಕೆ ಬದಲಾಗುತ್ತದೆ ಎಂದು ಹೇಳಿದರು.