ಬೆಂಗಳೂರು: ಕೋವಿಡ್ ಸೋಂಕು ಹೆಚ್ಚಳವಾಗುವ ಭೀತಿ ಹಿನ್ನೆಲೆ ಸಾರ್ವಜನಿಕ ಸಾರಿಗೆಗಳಾದ ಬಿಎಂಟಿಸಿ ಬಸ್ ಹಾಗೂ ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಬಿಎಂಟಿಸಿ ಎಂಡಿ ಕೆಎಸ್ ಸತ್ಯವತಿ ಸುತ್ತೋಲೆ ಹೊರಡಿಸಿದ್ದಾರೆ.
ಮಾಸ್ಕ್ ಹಾಕಿಕೊಳ್ಳದ ಪ್ರಯಾಣಿಕರಿಗೆ ಚಾಲನಾ ಸಿಬ್ಬಂದಿ ಅರಿವು ಮೂಡಿಸಬೇಕು. ಎಲ್ಲ ಸಿಬ್ಬಂದಿ ಅಧಿಕಾರಿಗಳೂ ಮಾಸ್ಕ್ ಹಾಕಿಕೊಂಡೇ ಕಾರ್ಯನಿರ್ವಹಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಬಿಎಂಟಿಸಿ ಎಂಡಿ ಸೂಚಿಸಿದ್ದಾರೆ.
ಮೆಟ್ರೋ, ಬಿಎಂಟಿಸಿ ಬಸ್ಗಳಲ್ಲಿ ಮಾಸ್ಕ್ ಕಡ್ಡಾಯ ಇನ್ನು ಮೆಟ್ರೋದಲ್ಲಿ ಇಲ್ಲಿಯವರೆಗೂ ಕಡ್ಡಾಯ ಇಲ್ಲದಿದ್ದರೂ ಬಹುತೇಕ ಜನ ಮಾಸ್ಕ್ ಧರಿಸಿಯೇ ಪ್ರಯಾಣಿಸುತ್ತಿದ್ದರು. ಇದೀಗ ಕಡ್ಡಾಯಗೊಳಿಸಲಾಗಿದ್ದು, ಮಾಸ್ಕ್ ಧರಿಸಿದ್ದರೆ ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಬಹುದಾಗಿದೆ. ಮಾಸ್ಕ್ ಇಲ್ಲವಾದಲ್ಲಿ ಭದ್ರತಾ ಸಿಬ್ಬಂದಿ ವಾಪಾಸು ಕಳುಸುತ್ತಿದ್ದಾರೆ. ಚೆಕಿಂಗ್ ಬಳಿಕವೂ ಮಾಸ್ಕ್ ಹಾಕಿಯೇ ಪ್ರಯಾಣಿಸುವಂತೆ ಸಿಬ್ಬಂದಿ ಎಚ್ಚರವಹಿಸಿದ್ದಾರೆ.
ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೋವಿಡ್ ಉಲ್ಬಣಗೊಂಡಿರುವುದರಿಂದ ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಹೆಚ್ಚು ಜನ ಪ್ರಯಾಣಿಸುವ ಸಮೂಹ ಸಾರಿಗೆಗಳಲ್ಲಿ ಈ ಸೂಚನೆ ನೀಡಲಾಗಿದೆ. ಅಲ್ಲದೆ ಸದ್ಯದಲ್ಲೇ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಸಂಭ್ರಮ ಇರಲಿದ್ದು, ಹೆಚ್ಚು ಜನದಟ್ಟಣೆಯಾಗದೇ ಆಚರಿಸಲು, ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ. ನಗರದ ಕೆ.ಆರ್ ಮಾರುಕಟ್ಟೆಯಲ್ಲೂ ಹೆಚ್ಚು ಜನದಟ್ಟಣೆ ಇರುವ ಕಾರಣಕ್ಕೆ ಜನ ಮಾಸ್ಕ್ ಧರಿಸುವಂತೆ ಮಾರ್ಷಲ್ಸ್ ಜನಜಾಗೃತಿ ಮೂಡಿಸುತ್ತಿದ್ದಾರೆ.
ಓದಿ:ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಿ, ಹಬ್ಬದ ಸೀಸನ್ನಲ್ಲಿ ಜನದಟ್ಟಣೆ ತಪ್ಪಿಸಿ: ರಾಜ್ಯಗಳಿಗೆ ಕೇಂದ್ರದ ಸಲಹೆ