ಬೆಂಗಳೂರು : ಎರಡು ಉಪ ಚುನಾವಣೆ ಉಸ್ತುವಾರಿ ಹೊತ್ತು ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುವಲ್ಲಿ ಸಫಲರಾಗಿದ್ದ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ಮಸ್ಕಿ ಮತದಾರರು ಬ್ರೇಕ್ ಹಾಕಿದ್ದಾರೆ. ಭಾರಿ ನಿರೀಕ್ಷೆಯೊಂದಿಗೆ ಪ್ರಚಾರದ ಅಖಾಡಕ್ಕೆ ಧುಮುಕಿದ್ದ ಸಿಎಂ ಪುತ್ರ ಸೋಲಿನ ಕಹಿಯೊಂದಿಗೆ ಮರಳುವಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯಲ್ಲಿ ಪವರ್ ಫುಲ್ ಲೀಡರ್ ಎಂದು ಗುರುತಿಸಿಕೊಂಡಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಪುತ್ರ ಬಿ ವೈ ವಿಜಯೇಂದ್ರ, ಈ ಬಾರಿಯ ಉಪ ಚುನಾವಣೆಯಲ್ಲಿ ವೈಫಲ್ಯ ಕಂಡಿದ್ದಾರೆ.
ಕೆ ಆರ್ ಪೇಟೆ ಹಾಗೂ ಶಿರಾ ಕ್ಷೇತ್ರಗಳಲ್ಲಿ ಕಮಲ ಅರಳಿಸಿ ಬೈ ಎಲೆಕ್ಷನ್ ಮಾಸ್ಟರ್ ಎಂದು ಕರೆಸಿಕೊಂಡಿದ್ದ ವಿಜಯೇಂದ್ರ ಮಸ್ಕಿಯಲ್ಲಿ ಎಡವಿದ್ದಾರೆ. ವಿಜಯೇಂದ್ರ ರಾಜಕೀಯ ಭವಿಷ್ಯಕ್ಕೂ ಈ ಚುನಾವಣಾ ಫಲಿತಾಂಶ ಹಿನ್ನಡೆ ತರಲಿದೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದ ಪ್ರತಾಪ್ ಗೌಡ ಪಾಟೀಲ್‌ಗೆ ಭಾರಿ ಅಂತರದ ಸೋಲಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಿಂದ ಅಂದಿನ ಬಿಜೆಪಿ ಅಭ್ಯರ್ಥಿ ಬಸವರಾಜ ತುರವಿಹಾಳ್ ವಿರುದ್ಧ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ಇದೀಗ ಅದೇ ಅಭ್ಯರ್ಥಿ ವಿರುದ್ಧ 26 ಸಾವಿರದಷ್ಟು ಮತಗಳ ಅಂತರದಿಂದ ಸೋತಿದ್ದಾರೆ.
ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯ ಅಭ್ಯರ್ಥಿ ಈಗ ಕಾಂಗ್ರೆಸ್‌ನಿಂದ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದರೂ ಮತದಾರರು ಮಾತ್ರ ಅಭ್ಯರ್ಥಿಗಳು ಅದುಲು ಬದಲಾದರೂ ವಿಜಯಲಕ್ಷ್ಮಿ ಅದಲು ಬದಲು ಮಾಡದೆ ಮತ್ತೊಮ್ಮೆ ಕಾಂಗ್ರೆಸ್ ಪರ ನಿಂತಿದ್ದಾಳೆ.
2019ರ ಅಂತ್ಯದಲ್ಲಿ ನಡೆದಿದ್ದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಬಿ ವೈ ವಿಜಯೇಂದ್ರ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದರು.
ಸಿಎಂ ಯಡಿಯೂರಪ್ಪ ಹುಟ್ಟೂರು ಬೂಕನಕೆರೆ ಇದೇ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಹುಟ್ಟೂರಿನಲ್ಲಿ ಪಕ್ಷವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ ಎನ್ನುವ ಯಡಿಯೂರಪ್ಪ ಕೊರಗು ನೀಗಿಸಿದ್ದರು.