ಬೆಂಗಳೂರು:ನಗರದಲ್ಲಿ ಇನ್ಮುಂದೆ ಜಾಗಿಂಗ್ ಮಾಡುತ್ತಿದ್ದೆ ಅಥವಾ ಕಾರಿನಲ್ಲಿ ಒಬ್ಬನೇ ಇದ್ದೆ ಎಂಬ ನೆಪ ಹೇಳಿ ಮಾಸ್ಕ್ ನಿಯಮ ಉಲ್ಲಂಘಿಸುವಂತಿಲ್ಲ. ಈ ಬಗ್ಗೆ ಸ್ಪಷ್ಟ ಸೂಚನೆ ಹೊರಡಿಸಿರುವ ಬಿಬಿಎಂಪಿ ಆಯುಕ್ತರು, ಜಾಗಿಂಗ್ ವೇಳೆ ಹಾಗೂ ವಾಹನ ಚಲಾಯಿಸುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದಿದ್ದಾರೆ.
ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದರೆ, ಕಾರಿನ ಬಾಗಿಲುಗಳನ್ನು ಬಂದ್ ಮಾಡಿ ಕಾರು ಚಲಾಯಿಸುತ್ತಿದ್ದರೆ, ಅಥವಾ ಬೈಕ್ನಲ್ಲಿ ಹಿಂಬದಿ ಸವಾರರಿಲ್ಲದೇ ಒಬ್ಬರೇ ಬೈಕ್ ಚಲಾಯಿಸುತ್ತಿದ್ದರೆ ಮಾಸ್ಕ್ ಕಡ್ಡಾಯವಿದೆಯೇ ಹಾಗೂ ಜಾಗಿಂಗ್ ವೇಳೆಯೂ ಮಾಸ್ಕ್ ಧರಿಸುವುದು ಕಡ್ಡಾಯವೇ ಎಂದು ಸಾರ್ವಜನಿಕರಲ್ಲಿ ಇದ್ದ ಗೊಂದಲಕ್ಕೆ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಕಾರು ಚಲಾಯಿಸುವಾಗ ಮಾಸ್ಕ್ ಧರಿಸದೆ ಇದ್ದವರಿಗೆ ದಂಡ ಹಾಕಿದ್ದಕ್ಕೆ ಸಾಕಷ್ಟು ವಿರೋಧ ಎದುರಾಗಿತ್ತು. ಜೊತೆಗೆ ಜಾಗಿಂಗ್ ವೇಳೆ ಮಾಸ್ಕ್ ಹಾಕಿದರೆ ಉಸಿರುಗಟ್ಟುತ್ತೆ. ಹೀಗಾಗಿ ಮಾಸ್ಕ್ನಿಂದ ವಿನಾಯಿತಿಗಾಗಿ ಒತ್ತಡ ಕೇಳಿಬಂದಿತ್ತು. ಈ ಹಿನ್ನೆಲೆ ರಾಜ್ಯಸರ್ಕಾರದ ಮಾರ್ಗಸೂಚಿ ಏನಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಪತ್ರ ಬರೆದು ಕೇಳಿದ್ದರು.
ಇದಕ್ಕೆ ಸಂಬಂಧಿಸಿದಂತೆ ಇಂದು ಟ್ವಿಟರ್ ಮೂಲಕ ಉತ್ತರಿಸಿರುವ ಆಯುಕ್ತ ಮಂಜುನಾಥ್ ಪ್ರಸಾದ್, ರಾಜ್ಯ ಸರ್ಕಾರದ ತಾಂತ್ರಿಕ ಸಲಹಾ ಸಮಿತಿಯ ಸೂಚನೆಯಂತೆ ವಾಹನ ಚಾಲಕರು ಹಾಗೂ ವಾಯುವಿಹಾರ, ಜಾಗಿಂಗ್ ಮಾಡುವವರು ಕೂಡಾ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಒಟ್ಟಿನಲ್ಲಿ ಮನೆಯಿಂದ ಹೊರಬಂದರೆ ಮಾಸ್ಕ್ ಧರಿಸುವುದು ಕಡ್ಡಾಯವೇ ಆಗಿರುತ್ತದೆ ಎಂದಿದ್ದಾರೆ.