ಬೆಂಗಳೂರು: ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 50 ಲಕ್ಷ ರೂ ಗೆ ಏರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇಂದು ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ 'ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2022' ರಲ್ಲಿ ಭಾಗವಹಿಸಿ ಮಹತ್ವದ ಘೋಷಣೆ ಮಾಡಿದ್ದಾರೆ.
ಈ ವರ್ಷ ಅರಣ್ಯ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ಇಲಾಖೆ ಮಾಡಿದೆ. ಅರಣ್ಯ ಇಲಾಖೆಯ ಸೇವೆಗೆ ಅಭಿನಂದನೆ ಸಲ್ಲಿಸುತ್ತೇನೆ. ಶೇ. 21ರಷ್ಟಿರುವ ಅರಣ್ಯವನ್ನು ಶೇ.30 ಕ್ಕೆ ಹೆಚ್ಚಿಸುವುದು ನಮ್ಮ ಗುರಿ. ಬಂಜರು ಭೂಮಿ, ಗುಡ್ಡಗಾಡುಗಳಲ್ಲಿ ಗಿಡಮರ ಬೆಳೆಸಬೇಕು ಎಂದು ಸಿಎಂ ಮನವಿ ಮಾಡಿದರು.
ಮನುಷ್ಯ-ಪ್ರಾಣಿ ಸಂಘರ್ಷ ಕಡಿಮೆ ಮಾಡಬೇಕಿದೆ. ಮನುಷ್ಯ ಕಾಡಲ್ಲಿ ಹೆಚ್ಚು ಇದ್ದಷ್ಟೂ ಪ್ರಾಣಿಗಳು ಹೊರಗೆ ಬರುತ್ತವೆ. ಅರಣ್ಯ ಇಲಾಖೆ ಈ ಸಂಘರ್ಷ ಕಡಿಮೆ ಮಾಡುವತ್ತ ಗಮನ ಕೊಡಬೇಕು. ಆನೆ-ಮಾನವ ಸಂಘರ್ಷ ಹೆಚ್ಚಿದೆ. ಆನೆಗಳು ಜಮೀನಿಗೆ ಬಾರದಂತೆ ತಡೆಯಲು ಹೊಸ ವಿಧಾನಗಳ ಅಳವಡಿಕೆಗೆ 100 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಉಮೇಶ್ ಕತ್ತಿಯವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.