ಬೆಂಗಳೂರು : ಮಂಗಳೂರು ಮಹಾನಗರ ಪಾಲಿಕೆಯು ನಗರದ ನೆಹರೂ ಆಟದ ಮೈದಾನದಲ್ಲಿ ಕೈಗೊಂಡಿದ್ದ ತರಕಾರಿ ಹಾಗೂ ಮಾಂಸದ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳಾದ ವಿಜಯ ಸುವರ್ಣ, ಮೊಹಮ್ಮದ್ ಹುಸೈನ್, ಅಂಥೋಣಿ ಸೆಬಾಸ್ಟಿಯನ್ ಫರ್ನಾಂಡಿಸ್ ಸೇರಿದಂತೆ 11 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ಎಚ್. ಸುನಿಲ್ ಕುಮಾರ್ ವಾದಿಸಿ, ಕರ್ನಾಟಕ ಉದ್ಯಾನ, ಆಟದ ಮೈದಾನ ಮತ್ತು ತೆರೆದ ಸ್ಥಳಗಳು (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 3ರ ಪ್ರಕಾರ ಈ ಮೈದಾನವನ್ನು 1985, 2010, 2017 ರಲ್ಲಿ ಆಟದ ಮೈದಾನ ಎಂದೇ ಸರ್ಕಾರ ಗುರುತಿಸಿದೆ. ಹಾಗೆಯೇ ಸೆಕ್ಷನ್ 6ರ ಪ್ರಕಾರ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಇಂತಹ ಪ್ರದೇಶಗಶಳನ್ನು ಕೈಗೊಳ್ಳುವಂತಿಲ್ಲ. ಮುಖ್ಯವಾಗಿ ಆಟದ ಮೈದಾನದಲ್ಲಿ ಮಾರುಕಟ್ಟೆಗೆ ಕಟ್ಟಡಗಳನ್ನು ನಿರ್ಮಿಸಿದರೆ ಸಾರ್ವಜನಿಕರ ಓಡಾಟಕ್ಕೂ ತೊಂದರೆ ಉಂಟಾಗುತ್ತದೆ. ಮುಂದಿನ ಪೀಳಿಗೆಗೆ ಆಟದ ಮೈದಾನ ಉಳಿಸುವ ಅಗತ್ಯವಿದೆ. ಮೇಲ್ದರ್ಜೆಗೇರಿಸಿದ ಮಾರುಕಟ್ಟೆ ನಿರ್ಮಿಸುವ ಅಗತ್ಯವಿದ್ದರೆ ಬೇರೆ ಜಾಗದಲ್ಲಿಯೂ ನಿರ್ಮಿಸಬಹುದು ಎಂದು ವಾದಿಸಿದರು.