ಬೆಂಗಳೂರು:ನಗರದಲ್ಲಿ ಮತ್ತೆ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುತ್ತಿರುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಹಲಸೂರು ಉಪವಿಭಾಗದ ತಂಡ ಇಬ್ಬರನ್ನು ಬಂಧಿಸಿದೆ.
ಮೊಹಮ್ಮದ್ ಶಾಕೀರ್ (34), ಕೃಷ್ಣಕುಮಾರ್ (36) ಬಂಧಿತ ಆರೋಪಿಗಳು. ಈ ಆರೋಪಿಗಳು ಬೈಯಪ್ಪಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ವಿ.ರಾಮನ್ ನಗರದ ಬಾಗ್ ಮನೆ ಟೆಕ್ ಪಾರ್ಕ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದರು. ಇದರ ಮಾಹಿತಿ ಸಂಗ್ರಹ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತರಿಂದ 1 ಕೆಜಿ ವೀಡ್ ಆಯಿಲ್, 16 ಕೆಜಿ ಗಾಂಜಾ ಹಾಗೆ ಕೃತ್ಯಕ್ಕೆ ಬಳಸಿದ ಒಂದು ವೋಲ್ಟ್ ವಯಾಗನ್ ವಶಪಡಿಸಿದ್ದಾರೆ. ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಮೂಲತಃ ಕೇರಳದವರಾಗಿದ್ದು, ಟೆಕ್ಕಿ ಮತ್ತು ಉದ್ಯಮಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ತನಿಖೆ ವೇಳೆ ಆರೋಪಿಗಳು ಆಂಧ್ರಪ್ರದೇಶದ ವಿಜಯವಾಡದಿಂದ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸಿ ಬೆಂಗಳೂರು ಮತ್ತು ಕೇರಳದಲ್ಲಿ ಹೆಚ್ಚಿನ ಬೆಲೆಗೆ ತಮ್ಮ ಗ್ಯಾಂಗ್ಗೆ ಮಾರಾಟ ಮಾಡುತ್ತಿದ್ದ ವಿಚಾರ ಬಾಯಿಬಿಟ್ಟಿದ್ದು, ಸದ್ಯ ತನಿಖೆ ಮುಂದುವರೆಸಿದ್ದಾರೆ.