ಬೆಂಗಳೂರು: ಮರಾಠ ಸಮುದಾಯವನ್ನು 3ಬಿ ಯಿಂದ 2ಎಗೆ ಸೇರ್ಪಡೆ, ಮರಾಠ ಅಭಿವೃದ್ಧಿ ನಿಗಮ ಮಂಡಳಿಗೆ ಅಧ್ಯಕ್ಷ ನೇಮಕ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮರಾಠ ಒಕ್ಕೂಟದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು.
ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಮುಖಂಡರು ಹಾಗೂ ಪದಾಧಿಕಾರಿಗಳು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಮರಾಠ ಸಮಾಜದ ಮುಖಂಡರಾದ ಪಿ.ಜಿ.ಆರ್. ಸಿಂಧ್ಯಾ, ಬೆಂಗಳೂರಿನ ಗೋ ಸಾಯಿ ಮಹಾಸಂಸ್ಥಾನಮಠದ ಮಂಜುನಾಥ ಸ್ವಾಮೀಜಿ ಸೇರಿದಂತೆ ಇತರರ ನಿಯೋಗ ಸಮುದಾಯದ ಬೇಡಿಕೆಗಳನ್ನು ಮುಖ್ಯಮಂತ್ರಿ ಮುಂದೆ ಇಟ್ಟಿತು.
ಶ್ರೀಮಂತ್ ಪಾಟೀಲ್ಗೆ ಸಚಿವ ಸ್ಥಾನ ನೀಡುವಂತೆ ಮನವಿ:
ಶಾಸಕ ಶ್ರೀಮಂತ್ ಪಾಟೀಲ್ ಪರವಾಗಿ ಬ್ಯಾಟಿಂಗ್ ಮಾಡಿದ ಸಮುದಾಯದ ನಿಯೋಗ, ಪಾಟೀಲ್ಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿತು. ಅಲ್ಲದೆ ಮರಾಠ ಸಮುದಾಯವನ್ನು 3ಬಿ ಯಿಂದ 2ಎಗೆ ಸೇರ್ಪಡೆ ಮಾಡಬೇಕು, ಮರಾಠ ಅಭಿವೃದ್ಧಿ ನಿಗಮ ಮಂಡಳಿಗೆ ಅಧ್ಯಕ್ಷ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಮರಾಠ ಸಮುದಾಯದ ಮನವಿ ಆಲಿಸಿದ ಸಿಎಂ, ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮೀಸಲಾತಿ ಸಂಬಂಧ ಸ್ಪಷ್ಟ ಭರವಸೆ ನೀಡದ ಸಿಎಂ, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷರ ನೇಮಕ ಕುರಿತು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೃಷ್ಣಾ ಎದುರು ಪ್ರತಿಭಟನೆ:
ಶ್ರೀಮಂತ ಪಾಟೀಲ್ಗೆ ಮತ್ತೆ ಸಚಿವ ಸ್ಥಾನ ನೀಡುವಂತೆ ಸಿಎಂ ಗೃಹ ಕಚೇರಿ ಕೃಷ್ಣಾ ಎದುರು ಪಾಟೀಲ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಸಚಿವ ಸ್ಥಾನ ಬೇಕು ಎಂದು ಗುಂಪುಗೂಡಿ ಘೋಷಣೆ ಮೊಳಗಿಸಿದರು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ನಿಯಂತ್ರಿಸಿದರು.