ಬೆಂಗಳೂರು :ಕೃಷಿಕನ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ನಾವು ಇಲಾಖೆಯಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಪರಿಣಾಮ ರೈತ ಶಕ್ತಿವಂತನಾಗುತ್ತಿದ್ದಾನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಸದನದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಮಾತನಾಡಿರುವುದು.. ಬಜೆಟ್ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಚಿವರು, ವಿದ್ಯಾವಂತರೂ ಸಹ ಇಂದು ಕೃಷಿ ಕಡೆ ಆಕರ್ಷಿತರಾಗುತ್ತಿದ್ದಾರೆ. ಕೃಷಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ನಮ್ಮ ಸರ್ಕಾರ ವಿದ್ಯಾರ್ಥಿ ವೇತನವನ್ನು ಕೊಡುತ್ತಿದೆ. 2020-21ನೇ ಬಜೆಟ್‍ನಲ್ಲಿ ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ ಶೇ.50ರಷ್ಟು ಮೀಸಲಾತಿ ನೀಡಿದ್ದೇವೆ. ಪರಿಣಾಮ 183 ಸೀಟುಗಳು ಲಭ್ಯವಾಗಿವೆ.
ರಾಜ್ಯದ ಸುಮಾರು 7 ವಿವಿಗಳಲ್ಲಿ 700 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರೈತರ ಮಕ್ಕಳಿಗೆ ಮೂರು ವರ್ಷಗಳ ಕಾಲ ತರಬೇತಿ ನೀಡುತ್ತೇವೆ. ಇದಕ್ಕಾಗಿ ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಖಾಸಗಿ ಕಂಪನಿಯವರು ಶೇ.85ರಷ್ಟು ಅಂದರೆ 555 ಕೋಟಿ ರೂ. ಹಾಗೂ ಶೇ.15ರಷ್ಟು ರಾಜ್ಯ ಸರ್ಕಾರ ಬಂಡವಾಳ ಹೂಡಿಕೆ ಮಾಡಲಿದೆ. ವಿಶ್ವವಿದ್ಯಾಲಯಗಳಲ್ಲಿ ಅಗತ್ಯವಿರುವ ತರಬೇತಿಯನ್ನು ರೈತರ ಮಕ್ಕಳಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಆಹಾರ ಸಂಸ್ಕರಣಾ ಘಟಕ :ರಾಜ್ಯದ 11 ಕಡೆ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಿದ್ದೇವೆ. ರೈತರು ತಾವು ಬೆಳೆದ ಬೆಳೆಗೆ ಸಕಾಲದಲ್ಲಿ ಬೆಲೆ ಸಿಗದಿದ್ದಾಗ ತಮ್ಮ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಇದರಿಂದ ಆಹಾರ ಪದಾರ್ಥಗಳು ಕೆಡುವುದಿಲ್ಲ. ಅವರು ತಮಗೆ ಬೇಕಾದ ಸಂದರ್ಭದಲ್ಲಿ ಮಾರಾಟ ಮಾಡಿಕೊಳ್ಳಬಹುದು ಎಂದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ಬ್ರಾಹ್ಮಣ, ಲಿಂಗಾಯತ, ದಲಿತರ ಇತಿಹಾಸದ ಕುರಿತು ಸ್ವಾರಸ್ಯಕರ ಚರ್ಚೆ
ಸಿರಿಧಾನ್ಯಕ್ಕೆ ಪ್ರೋತ್ಸಾಹ : ಈ ಹಿಂದೆ ಸಿರಿಧಾನ್ಯಗಳು ಬಡವರ ಧಾನ್ಯಗಳಾಗಿದ್ದವು. ಈ ಧಾನ್ಯಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಬಡವರು ಮಾತ್ರ ಖರೀದಿ ಮಾಡುತ್ತಿದ್ದರು. ಈಗ ರಕ್ತದೊತ್ತಡ, ಸಕ್ಕರೆ ಖಾಯಿಲೆ ಬಂದ ಮೇಲೆ ಸಿರಿಧಾನ್ಯಗಳು ಶ್ರೀಮಂತರ ಧಾನ್ಯಗಳಾಗಿವೆ. ನಮ್ಮ ಸರ್ಕಾರ ಇದಕ್ಕೆ ಹೆಚ್ಚಿನ ಪ್ರೊತ್ಸಾಹ ನೀಡುತ್ತದೆ ಎಂದು ಸಚಿವರು ತಿಳಿಸಿದರು. ಪ್ರಸಕ್ತ ವರ್ಷ ರಾಜ್ಯದ ನಾಲ್ಕು ಭಾಗಗಳಲ್ಲಿ ಸಿರಿಧಾನ್ಯಗಳ ಮೇಳ ನಡೆಸುವ ಚಿಂತನೆ ಇದೆ.
ಶೀಘ್ರದಲ್ಲೇ ಸ್ಥಳ, ದಿನಾಂಕಗಳನ್ನು ಘೋಷಣೆ ಮಾಡಲಿದ್ದೇವೆ. ಇದರಿಂದ ಸಿರಿಧಾನ್ಯಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ ಎಂದರು. ಇನ್ನು ಮುಂದೆ ತಿಂಗಳಿಗೆ ಒಂದು ಬಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯದ ಆಹಾರ ನೀಡಲು 10 ಕೋಟಿ ರೂ. ಅನುದಾನ ಮೀಸಲಿರಿಸಿದ್ದೇವೆ. ಇದರಿಂದ ಮಕ್ಕಳ ಆರೋಗ್ಯವೂ ಸದೃಢವಾಗಿರುತ್ತದೆ ಎಂದರು.