ಬೆಂಗಳೂರು:ಬಿಜೆಪಿ ಮತ್ತು ಜೆಡಿಎಸ್ನಿಂದ ಬಹಳಷ್ಟು ಜನ ಕಾಂಗ್ರೆಸ್ಗೆ ಬರುತ್ತಾರೆ. ಹಾಲಿ ಶಾಸಕರುಗಳೂ ಹಾಗೂ ಮಾಜಿಗಳು ಬರ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿಯಲ್ಲಿಂದು ಮಾತನಾಡಿದ ಅವರು, ಬರುವವರನ್ನೆಲ್ಲರನ್ನೂ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ನೋ ಆಪರೇಷನ್, ಪಕ್ಷದ ಸಿದ್ಧಾಂತ ಒಪ್ಪಿ ಬರುವವರು ಬಿಜೆಪಿಯವರಾಗಿರಲಿ ಅಥವಾ ಜೆಡಿಎಸ್ನವರಾಗಿರಲಿ, ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುತ್ತೇವೆ ಎಂದರು.
ಪ್ರಧಾನಿ ಮೋದಿಗೆ ಸಿಎಂ ತಿರುಗೇಟು:ಮಧ್ಯಪ್ರದೇಶ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ಮಾಡಿದ ಭಾಷಣಕ್ಕೆ ತಿರುಗೇಟು ನೀಡಿದ ಸಿಎಂ, ಮೋದಿಯವರು ರಾಜಕೀಯ ಭಾಷಣ ಮಾಡಿದ್ದಾರೆ. ರಾಜಕೀಯ ಅರೋಪ ಮಾಡುತ್ತ ಊಹಾಪೋಹದ ಹೇಳಿಕೆ ಕೊಟ್ಟಿದ್ದಾರೆ. ಪಾಪ ಅವರು ನಿರಾಶರಾಗಿದ್ದು, ರಾಜ್ಯಕ್ಕೆ 48 ಬಾರಿ ಬಂದರೂ, ಅವರು ಹೋದ ಕಡೆಯಲ್ಲಾ ಸೋತರು. ರೊಡ್ ಶೋ, ಸಾರ್ವಜನಿಕ ಸಭೆ ಮಾಡಿದಲ್ಲೆಲ್ಲ ಸೋತಿದ್ದಾರೆ. ಹಾಗಾಗಿ ಇಲ್ಲಿಯವರೆಗೆ ವಿರೋಧ ಪಕ್ಷದ ನಾಯಕನನ್ನು ಮಾಡಲು ಆಗಿಲ್ಲ. ಅಷ್ಟರಮಟ್ಟಿಗೆ ಬಿಜೆಪಿ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಸಿಎಂ, ಸಿಎಂ ಲೂಟಿ ಮಾಡುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, 40% ಲೂಟಿ ಮಾಡುತ್ತಿದ್ದಾರೆ ಅಂತ ಹೇಳಿದ್ದು ಯಾರು? ಆಗ ಯಾವ ಸರ್ಕಾರ ಇತ್ತು. ಆಗ ನರೇಂದ್ರ ಮೋದಿ ಪಕ್ಷವೇ ಇದ್ದಿದ್ದು. ನಮ್ಮ ಮೇಲೆ ಆ ತರ ಹೇಳಿದ್ರಾ? ಅದಕ್ಕೆ ನಾವೆಲ್ಲ ತನಿಖೆ ಮಾಡಿಸುತ್ತಿದ್ದೇವೆ. ಈ ದೇಶದ ಪ್ರಧಾನಿಯಾಗಿ ಅದರ ಬಗ್ಗೆ ಹೇಳಬೇಕಲ್ವಾ? ಅವರಿಗೆ ಏನಾದರೂ ದಾಖಲಾತಿ ಇದ್ದರೆ ಹೇಳಲಿ. ಒಬ್ಬ ಪ್ರಧಾನಿಯಾಗಿದ್ದುಕೊಂಡು ಸುಳ್ಳು ಹೇಳಬಾರದು, ಲಘುವಾಗಿ ಮಾತನಾಡಬಾರದು. ಅವರಿಗೆ ಐಬಿ (ಇಂಟೆಲಿಜೆನ್ಸ್ ಬ್ಯೂರೋ), ರಾ (ಆರ್‌ಎಡಬ್ಲ್ಯೂ), ಕೇಂದ್ರ ತನಿಖಾ ದಳ (ಸಿಬಿಐ) ಇದೆ. ಅದರ ಮೂಲಕ ತನಿಖೆ ಮಾಡಲಿ. ದೇಶ ಇವತ್ತು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನೂ ಕೂಡ ಅವರಿಗೆ ಬರಗಾಲದ ಪರಿಹಾರ ಕೊಡಲು ಆಗಿಲ್ಲ. ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ನಮ್ಮಿಂದ ಸಾಧ್ಯವಿಲ್ಲ ಅಂತಾ ಪ್ರಧಾನಿ ಮೋದಿ ಹೇಳಿದ್ದರು. ಈಗ ನಾವು ಜಾರಿ ಮಾಡಿಲ್ವಾ? ಈ ರೀತಿ ಹೇಳಿಕೆ ಕೊಡುತ್ತಾರೆ ಅಂತಾ ನಾನು ನಿರೀಕ್ಷೆ ಮಾಡಿರಲಿಲ್ಲ. ಇದೆಲ್ಲ ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಸಿಎಂ ಕಿಡಿಕಾರಿದ್ದಾರೆ.