ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಹಲವು ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು ಹಾಗೂ ಗಣ್ಯ ವ್ಯಕ್ತಿಗಳು ಗುರುವಾರ ಆಮ್ ಆದ್ಮಿ ಪಾರ್ಟಿಗೆ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಪಕ್ಷದ ಉಪಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಾಗೂ ಖ್ಯಾತ ಕಲಾವಿದ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಮ್ಮುಖದಲ್ಲಿ ಸೇರ್ಪಡೆಯಾದರು.
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ರಾಜ್ಯದ ಜನತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಅಧಿಕಾರ ಕೊಟ್ಟು, ಉತ್ತರ ಕರ್ನಾಟಕದ ಅಭಿವೃದ್ಧಿಯು ಅವುಗಳಿಂದ ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದಾರೆ. ಅಲ್ಲಿನ ನೀರಾವರಿ ಯೋಜನೆಗಳು ಹಲವು ದಶಕಗಳಿಂದ ನನೆಗುದಿಗೆ ಬಿದ್ದಿವೆ.
ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬಿಡುಗಡೆಯಾದ ಸಾವಿರಾರು ಕೋಟಿ ರೂಪಾಯಿ ಹಣ ಭ್ರಷ್ಟ ರಾಜಕಾರಣಿಗಳ ಜೇಬು ಸೇರಿವೆ. ಪಾರದರ್ಶಕ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತಿರುವ ಅಲ್ಲಿನ ನಾಯಕರು ಹಾಗೂ ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ಎಎಪಿ ಸೇರುತ್ತಿದ್ದಾರೆ ಎಂದು ಹೇಳಿದರು.
ಆಮ್ ಆದ್ಮಿಗೆ ಸೇರ್ಪಡೆ:ಕುರುಬ ಸಮುದಾಯದ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರಾದ ಶಿವರಾಯಪ್ಪ ದೊಡ್ಡರಿಯಪ್ಪ ಜೋಗಿನ್, ರೈತ ನಾಯಕ ಹಾಗೂ ಬಿಜೆಪಿಯ ಬಾಗಲಕೋಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಕೋಮರ್, ನಾಗರತ್ನ ಶಿಕ್ಷಣ ಮತ್ತು ಕಲ್ಯಾಣ ಸೇವೆಗಳ ಸಂಸ್ಥೆಯ ಮುಖ್ಯಸ್ಥ ಅನಿಲ್ ಕುಮಾರ್ ಬೇಗಾರ್, ಯುವ ಜನತಾದಳದ ಮಾಜಿ ಧಾರವಾಡ ಜಿಲ್ಲಾಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಸಂಜೀವ್ ಕುಮಾರ್ ಕುಲಕರ್ಣಿ ಎಎಪಿ ಪಕ್ಷ ಸೇರಿದರು
ʻಕಲ್ಬುರ್ಗಿ ಕಲರವʼ ಮತ್ತು ʻಬೆನಕ ಟೈಮ್ಸ್ʼ ಮಾಸಿಕ ಪತ್ರಿಕೆ ಪ್ರಧಾನ ಸಂಪಾದಕ ಸಾ.ಸಿ. ಬೆನಕನಳ್ಳಿ, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷೆ ಡಾ. ಗೀತಾ ಮಹಾಂತೇಶ್ ಯಾದಗಿ, ಅಧ್ಯಾಪಕರ ಸಂಘದ ಒಕ್ಕೂಟಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ, ಮುಂಡರಿಗಿ ಪರಸಭಾ ಸದಸ್ಯ ಹಾಗೂ ಮುಂಡರಿಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ರಾಮನಹಳ್ಳಿ, ವಕೀಲರು ಹಾಗೂ ಕುಷ್ಟಗಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹುಲಗಪ್ಪ ಚುರಿ, ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯ ಹಾಲುಮತ ಮಹಾಸಭಾ ಸಂಘದ ಯುವ ಘಟಕದ ಅಧ್ಯಕ್ಷ ಸೋಮಣ್ಣ ಮಲ್ಲೂರು, ಸೊರಬ ತಾಲೂಕು ಸಮಾಜ ಸೇವಕ ಕೆ.ವೈ.ಚಂದ್ರಶೇಖರ, ಬಾಗಲಕೋಟೆ ಜಿಲ್ಲಾ ರೈತ ಮುಖಂಡ ಕೊಳ್ಳಿ, ಬಿಜಾಪುರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಲೋನಿ ಸೇರಿದಂತೆ ಅನೇಕರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.
ಅನೇಕ ಮುಖಂಡರು, ಬಾದಾಮಿ ಕ್ಷೇತ್ರದ ಸಿದ್ದರಾಮಯ್ಯನವರ ಬೆಂಬಲಿಗರು ಹಾಗೂ ಬಿಜೆಪಿಯ ಅನೇಕ ನಾಯಕರು ಭಾಗವಹಿಸಿದ್ದರು.
ಇದನ್ನೂ ಓದಿ:ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದ ಮುಖ್ಯಮಂತ್ರಿ ಚಂದ್ರು ಇಂದು 'ಆಪ್'ಗೆ ಸೇರ್ಪಡೆ