ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ನಿನ್ನೆ (ಮಂಗಳವಾರ) ಬೆಂಗಳೂರು ಬಂದ್ ಕರೆ ಕೊಟ್ಟಿದ್ದವು. ಬಂದ್ ಎಫೆಕ್ಟ್ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಪ್ ಆಗಬೇಕಿದ್ದ 13 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.
ಪ್ರಯಾಣಿಕರು ಸಕಾಲಕ್ಕೆ ಏರ್ಪೋರ್ಟ್ ತಲುಪಲಾಗದೇ ಇಂಡಿಗೋ ವಿಮಾನ ಸಂಸ್ಥೆಯ 10 ದೇಶಿ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಇದರ ಜೊತೆಗೆ ಆಕಾಶ್ ಏರ್, ಏರ್ ಏಷ್ಯಾ ಇಂಡಿಯಾ, ಸ್ಟಾರ್ ಏಷ್ಯಾ ವಿಮಾನ ಸಂಸ್ಥೆಗಳ ತಲಾ ಒಂದು ವಿಮಾನ ಹಾರಾಟ ರದ್ದಾಗಿರುವ ಬಗ್ಗೆ ಕೆಐಎಎಲ್ ಮಾಹಿತಿ ನೀಡಿದೆ.
ಬಹುತೇಕ ಪ್ರಯಾಣಿಕರು ಮುಂಜಾನೆಯೇ ಬಂದು ಏರ್ಪೋರ್ಟ್ನಲ್ಲಿ ಕಾದು ನಂತರ, ವಿಮಾನಗಳಲ್ಲಿ ಪ್ರಯಾಣಿಸಿದರು. ಬಿಎಂಟಿಸಿ ವಜ್ರ ಬಸ್ಗಳು, ಓಲಾ ಉಬರ್ ಮತ್ತು ಏರ್ಪೋರ್ಟ್ ಟಾಕ್ಸಿಗಳು ಎಂದಿನಂತೆ ಸಂಚಾರಿಸುತ್ತಿದ್ದವು. ಇದರಿಂದ ಕೆಲವು ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ತಲುಪಿ ವಿಮಾನಯಾನ ಮಾಡಿದ್ದಾರೆ.
ಬೆಂಗಳೂರು ಬಂದ್ ಬಹುತೇಕ ಶಾಂತಿಯುತ:ಬೆಂಗಳೂರು ಬಂದ್ ಬಹುತೇಕ ಶಾಂತಿಯುತವಾಗಿತ್ತು. ನಗರದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳು, ಖಾಸಗಿ ಕಂಪನಿಗಳು ಸೇರಿದಂತೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಸಹಕಾರ ನೀಡಿದ್ದವು. ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರ ಕೂಡಾ ಕಡಿಮೆ ಇತ್ತು. ಆಟೋ, ಕ್ಯಾಬ್‌ಗಳು, ಸಾರಿಗೆ ವಾಹನಗಳು ಹಾಗೂ ನಮ್ಮ ಮೆಟ್ರೋ ಸಂಚಾರ ಎಂದಿನಂತಿತ್ತು.