ಬೆಂಗಳೂರು: ಹೈಕೋರ್ಟ್ ಛೀಮಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಮೇಕೆದಾಟು ಪಾದಯಾತ್ರೆಯನ್ನು ಮೊಟಕುಗೊಳಿಸಿದೆ. ಮೂರನೇ ಅಲೆಯ ಅಬ್ಬರದ ನಡುವೆ ನಡೆದ ಈ ಪಾದಯಾತ್ರೆ ಸೂಪರ್ ಸ್ಪ್ರೆಡರ್ ಆಗುವ ಭೀತಿ ಎದುರಾಗಿತ್ತು. ಅದೇ ರೀತಿ ಪಾದಯಾತ್ರೆಯಲ್ಲಿ ಭಾಗಿಯಾದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕೊನೆಗೂ ಕಾಂಗ್ರೆಸ್ ಮೇಕೆದಾಟು ಯೋಜನೆಯನ್ನು ಮೊಟಕುಗೊಳಿಸಿದೆ. ಹೈಕೋರ್ಟ್ ಛೀಮಾರಿ ಬಳಿಕವೂ ಪಾದಯಾತ್ರೆ ನಡೆಸಿದರೆ ಆಗುವ ಅನಾಹುತ ಮನಗಂಡ ಕೈ ಪಕ್ಷ ಅರ್ಧಕ್ಕೆ ತನ್ನ ಪಾದಯಾತ್ರೆಯನ್ನು ಮೊಟಕುಗೊಳಿಸಬೇಕಾಯಿತು. ಕೋವಿಡ್ ಮೂರನೇ ಅಲೆಯ ಆರ್ಭಟ ಹೆಚ್ಚುತ್ತಿರುವ ಮಧ್ಯೆ ಸಾವಿರಾರು ಜನರೊಂದಿಗೆ ಪಾದಯಾತ್ರೆ ನಡೆಸಿದ್ದರ ವಿರುದ್ಧ ಜನಾಕ್ರೋಶವೂ ವ್ಯಕ್ತವಾಗಿತ್ತು. ಇತ್ತ ಏನೂ ಕ್ರಮ ಕೈಗೊಳ್ಳದೆ ಕೈ ಕಟ್ಟಿ ಕೂತ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.
ಪಾದಯಾತ್ರೆ ಸೂಪರ್ ಸ್ಪ್ರೆಡರ್ ಆಗುವ ಎಲ್ಲಾ ಆತಂಕ ಮೂಡಿತ್ತು. ಹಲವು ಕಾಂಗ್ರೆಸ್ ಮುಖಂಡರಲ್ಲೂ ಈ ಭೀತಿ ಎದುರಾಗಿತ್ತು. ಇದಕ್ಕೆ ಇಂಬು ನೀಡುವಂತೆ ಪಾದಯಾತ್ರೆಯಲ್ಲಿ ಭಾಗಿಯಾದ ಕೆಲವರಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಜ್ವರ, ಸುಸ್ತು ಹಿನ್ನೆಲೆಯಲ್ಲಿ ಕೆಲ ಕೈ ನಾಯಕರು ಕೋವಿಡ್ ಟೆಸ್ಟ್ ಮಾಡಿಸಿದ್ದರು. ಟೆಸ್ಟ್ ಮಾಡಿಸಿದವರಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ.
ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ.. ಅಂದಿನಿಂದ ಇಂದಿನವರೆಗೆ ಏನೆಲ್ಲಾ ಬೆಳವಣಿಗೆ..!
ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಕೊರೊನಾ ಕಾಣಿಸಿಕೊಂಡವರ ಪೈಕಿ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮೊದಲಿಗರಾಗಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರಿಂದ ಕೊರೊನಾ ಬಂದಿರುವುದಾಗಿ ಬಿಜೆಪಿ ಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿತ್ತು. ಬಳಿಕ ಹಿರಿಯ ಮುಖಂಡ ವೀರಪ್ಪ ಮೊಯ್ಲಿಗೂ ಕೊರೊನಾ ತಗುಲಿತು. ಮೊಯ್ಲಿ ಕೂಡ ಪಾದಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಬಳಿಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಚಿವ ಶಿವಶಂಕರ ರೆಡ್ಡಿ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಮಹಿಳಾ ನಾಯಕಿಯರಾದ ಕಮಲಾಕ್ಷಿ ರಾಜಣ್ಣಗೆ ಕೋವಿಡ್ ಕಾಣಿಸಿಕೊಂಡಿದೆ.
ಹಲವರಲ್ಲಿ ಕೋವಿಡ್ ಲಕ್ಷಣ?:
ಇತ್ತ ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಲವು ನಾಯಕರಲ್ಲಿ ಜ್ವರ, ನೆಗಡಿ, ಗಂಟಲು ನೋವು ಸೇರಿ ಕೋವಿಡ್ ರೋಗ ಲಕ್ಷಣ ಇರುವುದು ಪತ್ತೆಯಾಗಿದೆ. ಆದರೆ, ಬಹುತೇಕರು ಈಗಲೂ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿಲ್ಲ.
ಡಿಕೆಶಿಗೆ ಪರೀಕ್ಷೆ ಮಾಡಿಸಲು ಆರೋಗ್ಯಧಿಕಾರಿಗಳು ಹೋಗಿದ್ದಾಗ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದರು. ಆರೋಗ್ಯಾಧಿಕಾರಿಗಳನ್ನೇ ಡಿಕೆಶಿ ತರಾಟೆಗೆ ತೆಗೆದುಕೊಂಡಿದ್ದರು. ಇತ್ತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೂ ಪಾದಯಾತ್ರೆಯ ಮೊದಲನೇ ದಿನ ಜ್ವರ ಕಾಣಿಸಿಕೊಂಡಿತ್ತು. ಅದೇ ರೀತಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಲವು ಕೈ ನಾಯಕರಲ್ಲಿ ಕೋವಿಡ್ ಲಕ್ಷಣ ಕಾಣಿಸಿಕೊಂಡಿದೆ. ಶಾಸಕಿ ಲಕ್ಷಿ ಹೆಬ್ಬಾಳ್ಕರ್ ಸೇರಿ ಹಲವು ಶಾಸಕರು, ಮುಖಂಡರಲ್ಲಿ ಜ್ವರ, ನೆಗಡಿ ಕಾಣಿಸಿಕೊಂಡಿದೆ.