ಬೆಂಗಳೂರು :ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ಹೀಗಾಗಿ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ವಿ ಎಸ್ ಉಗ್ರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಚಿವ ರಮೇಶ್ ಜಾರಕಿಹೊಳಿ ಅವರು ನನ್ನ ಸಹೋದರ. ನಾವಿಬ್ಬರೂ ಒಂದೇ ಗೋತ್ರಕ್ಕೆ ಸೇರಿದವರು. ಅವರು ಡಿಸಿಎಂ ಆಗಬೇಕೆಂಬ ಕನಸು ಕಂಡಿದ್ದರು. ಆದರೆ, ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇರುವುದರಿಂದ ಅದು ಸಾಧ್ಯವಾಗಲಿಲ್ಲ ಎಂದರು.
ರಮೇಶ್ ಜಾರಕಿಹೊಳಿಯವರೇ ನಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ. ಹಳೆ ನೀರು ಹರಿದುಹೋಗಿದೆ, ಬಿಜೆಪಿಯಲ್ಲಿ ಎಲ್ಲಾ ಮೊದಲಿನ ತರ ಇಲ್ಲ. ನಿಜಕ್ಕೂ ಜಾರಕಿಹೊಳಿ ಜೊತೆ ನಮ್ಮ ಪಕ್ಷದವರು ಸಂಪರ್ಕದಲ್ಲಿದ್ದರೆ, ಅವರ ಹೆಸರು ಹೇಳಲಿ. ನಮ್ಮ ಸಂಪರ್ಕದಲ್ಲಿರುವ ಬಿಜೆಪಿಯವರ ಹೆಸರು ಬಹಿರಂಗಪಡಿಸುತ್ತೇನೆ. ಡಿಸಿಎಂ ಲಕ್ಷ್ಮಣ ಸವದಿ ಒಳಗೊಂಡಂತೆ ಯಾರ್ಯಾರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದರು.
ಕಾಂಗ್ರೆಸ್ನಿಂದ ಹೊರ ಹೋದವರು ಬೇರೆ ಬೇರೆ ದಾರಿ ಹುಡುಕುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ನಾನು ಅದನ್ನು ತಿಳಿಸುತ್ತೇನೆ. ಈಗಾಗಲೇ ಈ ಮಾಹಿತಿಯನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್ಪಿ ನಾಯಕರ ಗಮನಕ್ಕೂ ತಂದಿದ್ದೇನೆ ಎಂದರು.