ಬೆಂಗಳೂರು: ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ನಗರದ ಮಲ್ಲೇಶ್ವರದಲ್ಲಿರುವ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬೀಗ ಹಾಕಿದ್ದಾರೆ. 53 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆೆಲೆಯಲ್ಲಿ ಮಾಲ್‌ನ ಮುಖ್ಯದ್ವಾರಕ್ಕೆೆ ಜಂಟಿ ಆಯುಕ್ತ ಯೋಗೇಶ್ ಬೀಗ ಜಡಿದರು.
2019-20ರವರೆಗಿನ ತೆರಿಗೆಯನ್ನು ಮಾಲ್ ಬಾಕಿ ಉಳಿಸಿಕೊಂಡಿತ್ತು. 2020ರ ಆಗಸ್ಟ್‌ನಲ್ಲಿ ಮಾಲ್ ಆಡಳಿತ ಮಂಡಳಿಯು ಬಿಬಿಎಂಪಿಗೆ 10 ಕೋಟಿ ರೂಪಾಯಿ ಮೊತ್ತದ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿದ್ದು, ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಕೂಡ ಮಾಲ್ ಆಡಳಿತ ಮಂಡಳಿ ತೆರಿಗೆ ಪಾವತಿಸಿರಲಿಲ್ಲ.
ಈ ಹಿಂದೆಯೂ ಕೂಡ ಮಂತ್ರಿ ಮಾಲ್ ಸುಮಾರು 42,63,40,874 ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಮಾಲ್ ಕಚೇರಿಯ ಕುರ್ಚಿ, ಟೇಬಲ್, ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಬಿಬಿಎಂಪಿ ಸಿಬ್ಬಂದಿ ವಶಕ್ಕೆೆ ಪಡೆದುಕೊಂಡಿದ್ದರು. ತೆರಿಗೆ ಪಾವತಿಸದ ವಿಚಾರವಾಗಿ ಮಂತ್ರಿ ಸ್ಕ್ವೇರ್ ಮಾಲ್‌ಗೆ ಬೀಗ ಜಡಿಯುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಮೂರು ನಾಲ್ಕು ಬಾರಿ ಬೀಗ ಹಾಕಲಾಗಿದೆ. 2021ರಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದರು. ಬಳಿಕ ಬೀಗ ಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿತ್ತು.