ಬೆಂಗಳೂರು : ಕೊರೊನಾ ಸೋಂಕು ಎಲ್ಲರಿಗೂ ಹಬ್ಬಿಸಿದ ನಂತರ ರಿಪೋರ್ಟ್ ಬರುತ್ತದೆ. ಯಾವ ಸೀಮೆ ಪರೀಕ್ಷೆ ಇದು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಟೀಕಿಸಿದ್ದಾರೆ.
ಸರ್ಕಾರದ ನಿಯಮ ವಿರುದ್ಧ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಟೀಕೆ ವಿಧಾನಸಭೆಯಲ್ಲಿ ಇಂದು ಕೊರೊನಾ ನಿಯಂತ್ರಣ ಸಂಬಂಧ ಸರ್ಕಾರದಿಂದ ಉತ್ತರ ನೀಡುತ್ತಿದ್ದ ವೇಳೆ ಮಾತನಾಡಿದ ಅವರು, ರ‍್ಯಾಪಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಬರುತ್ತದೆ. ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ನೆಗೆಟಿವ್ ಬರುತ್ತದೆ. ಇನ್ನು ಆ ಟೆಸ್ಟ್ ಮಾಡಿಸಿದ ರಿಪೋರ್ಟ್ ಸಹ ಬರುವುದಕ್ಕೆ ಮೂರ್ನಾಲ್ಕು ದಿನ ಆಗುತ್ತದೆ. ಅಷ್ಟರಲ್ಲೇ ಟೆಸ್ಟ್ ಮಾಡಿಸಿದ ವ್ಯಕ್ತಿ ನೆಂಟರ ಮನೆ, ಸ್ನೇಹಿತರ ಭೇಟಿ, ಅಲ್ಲಿ-ಇಲ್ಲಿ ಅಂತ ಎಲ್ಲ ಕಡೆ ಸುತ್ತಾಡಿ ಕೊಂಡು ಎಲ್ಲರಿಗೂ ಕೊರೊನಾ ಸೋಂಕು ಅಂಟಿಸಿ ಹೋಗಿರುತ್ತಾನೆ. ಇದೇನಾ ನಿಮ್ಮ ವ್ಯವಸ್ಥೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಖಾಸಗಿ ಆಸ್ಪತ್ರೆಗಳಿಂದ ಸುಲಿಗೆ...
ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂ. ಸುಲಿಗೆ ಮಾಡುತ್ತಿವೆ. ಸಚಿವರು ಖಾಸಗಿ ಆಸ್ಪತ್ರೆಗಳನ್ನು ಹೊಗಳಿದ್ದೇ ಹೊಗಳಿದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಕ್ಸಿಜನ್ ಹಾಕಿದರೆ ಮಧ್ಯಾಹ್ನಕ್ಕೆ ಮುಗಿಯುತ್ತದೆ. ರಾತ್ರಿ ವೇಳೆಗೆ ರೋಗಿ ಫಿನಿಶ್ ಆಗಿಬಿಡುತ್ತಾನೆ. 300 ರೂ.ಗೆ ಕಿಟ್ ಸಿಗುತ್ತದೆ. ಅದನ್ನು 2500 ರೂ.ಗೆ ಮಾರಾಟ ಮಾಡುತ್ತಾರೆ. ಯಾವ್ಯಾವ ಕಂಪನಿಯಿಂದ ನೀವು ಮೆಡಿಕಲ್ ಕಿಟ್ ಪಡೆದಿದ್ದೀರಾ? ಎಂದು ಪ್ರಶ್ನಿಸಿದರು.
ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರ ಮಾಡಿದ್ದರೆ ಅಂತಹವರನ್ನು ದೇವರೇ ನೋಡಿಕೊಳ್ಳುತ್ತಾನೆ. ಅಂತವರಿಗೆ ದೊಡ್ಡ ರೋಗ ಬರುತ್ತದೆ ಎಂದು ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.