ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್-ಕಿ-ಬಾತ್‍ನ 100ನೇ ಆವೃತ್ತಿಯನ್ನು ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜೀವ್ ಚಂದ್ರಶೇಖರ್, ವಿಧಾನಪರಿಷತ್ ಸದಸ್ಯೆ ಮತ್ತು ಬಿಜೆಪಿ ವಕ್ತಾರರಾದ ಡಾ.ತೇಜಸ್ವಿನಿ ಗೌಡ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ವೀಕ್ಷಿಸಿದರು.
ಕಾರ್ಯಕ್ರಮದ ನಂತರ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಮನ್-ಕಿ-ಬಾತ್ ಕಾರ್ಯಕ್ರಮ ಕೇವಲ ಪ್ರಧಾನ ಮಂತ್ರಿಯವರ ಕಾರ್ಯಕ್ರಮವಲ್ಲ. ಇದು ಜನಾಂದೋಲನದ ಕಾರ್ಯಕ್ರಮ. ಪ್ರಧಾನಿಯವರು ಪ್ರತಿನಿಧಿಯಷ್ಟೇ ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮ 100 ಆವೃತ್ತಿಗಳನ್ನು ಪೂರೈಸಿದೆ. ಸಾಮಾನ್ಯ ಜನರ ಆಶೋತ್ತರಗಳು ಮತ್ತು ಭಾವನೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪವಿತ್ರ ದಿನ ಇದಾಗಿದೆ ಎಂದು ನುಡಿದರು.
ಕಾರ್ಯಕ್ರಮಗಳಲ್ಲಿ ಸಾಮೂಹಿಕ ಅಭಿವ್ಯಕ್ತವಾಗಿದೆ. ಪ್ರಧಾನಿಯವರು ಕೆಲ ವಿಷಯಗಳನ್ನು ಎರಡು ಮೂರು ಆವೃತ್ತಿಗಳಲ್ಲಿ ಪುನರಾವರ್ತಿಸಿದ್ದಾರೆ. ಇದು ನೀತಿಗಳ ಅನುಷ್ಠಾನಕ್ಕೆ ಅನುವು ಮಾಡಿಕೊಟ್ಟಿದೆ. ಭಾರತೀಯ ಕತೆ ಹೇಳುವ ವಿಧಾನ, ಆಟವಾಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿದೆ. ಪ್ರಧಾನಿಯವರು ಮನ್-ಕಿ-ಬಾತ್ ಮೂಲಕ ಅನೇಕ ಸ್ಪೂರ್ತಿದಾಯಕ ಕತೆಗಳನ್ನು ಹೇಳಿದ್ದಾರೆ. ಕಾರ್ಯಕ್ರಮದಿಂದ ಹಲವು ಸಾರ್ವಜನಿಕ ಆಂದೋಲನಗಳು ನಡೆದಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಮೂಲಕ ಅನೇಕ ಸಣ್ಣ ಉದ್ಯಮಗಳು ಬೆಳಕಿಗೆ ಬಂದಿವೆ. ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಸಂಸ್ಕೃತಿ, ಪರಂಪರೆ ಉತ್ತೇಜಿಸುವ, ಪರಿಸರ ಸಂರಕ್ಷಣೆ ಸಂದೇಶದ ಮನ್-ಕಿ-ಬಾತ್ ವಿಶಿಷ್ಟ ಪ್ರಯೋಗವಾಗಿದೆ ಎಂದು ಹೇಳಿದರು.
ಜಗದಗಲ ಪಸರಿಸಿದ ಮನ್ ಕಿ ಬಾತ್:ಇಂದು ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್‍ನ 100 ನೇ ಸಂಚಿಕೆ ಜಗದಗಲ ಪಸರಿಸಿತು. ದೇಶದ ವಿವಿಧೆಡೆ ಬಿಜೆಪಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದರೆ, ವಿದೇಶದಲ್ಲೂ ಅದು ಪ್ರಸಾರ ಕಂಡಿತು.