ಕರ್ನಾಟಕ

karnataka

ETV Bharat / state

ಮೂರಕ್ಕಿಂತ ಹೆಚ್ಚು ಪ್ರಕರಣಗಳಿದ್ದರೆ ಮಾತ್ರ ಕಂಟೈನ್ಮೆಂಟ್​ ಝೋನ್​: ಮಂಜುನಾಥ್ ಪ್ರಸಾದ್

ಒಂದು ಕೊರೊನಾ ಪ್ರಕರಣ ಕಂಡು ಬಂದ ಸ್ಥಳಗಳಲ್ಲಿ ಕಂಟೈನ್ ಮೆಂಟ್ ಸೂಕ್ತವಲ್ಲ, ಹೀಗಾಗಿ ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆಯೂ ಚರ್ಚೆ ಮಾಡಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Manjunath prasad
Manjunath prasad

By

Published : Aug 31, 2020, 3:53 PM IST

ಬೆಂಗಳೂರು: ನಗರದ ಹೋಂ ಐಸೋಲೇಷನ್ ನಲ್ಲಿರುವವರ ನಿರ್ವಹಣೆ ಬಗ್ಗೆ ಆಯುಕ್ತ ಮಂಜುನಾಥ್ ಪ್ರಸಾದ್ ವಿವರಣೆ ನೀಡಿದ್ದು, ಮೂರು ಅಥವಾ ಮೂರಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಒಂದೇ ಕಡೆ ಕಂಡುಬಂದರೆ ಮಾತ್ರ ಕಂಟೈನ್ ಮೆಂಟ್ ಮಾಡಲಾಗುವುದು ಎಂದಿದ್ದಾರೆ.

ಕಂಟೈನ್ ಮೆಂಟ್ ಝೋನ್ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನಲೆ ದುಂದು ವೆಚ್ಚದ ಬಗ್ಗೆಯೂ ಗಮನಕ್ಕೆ ಬಂದಿದೆ. ಹೀಗಾಗಿ ಇವತ್ತು ಎಲ್ಲಾ ಇಂಜಿನಿಯರ್ ಗಳ ಸಭೆ ಮಾಡಿ ಕಂಟೈನ್ ಮೆಂಟ್ ಝೋನ್ ಮಾಡಲು ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ?, ಯಾರು ಅನುಮತಿ ಕೊಟ್ಟಿದಾರೆ? ಎಂಬ ವಿವರ ತೆಗೆದುಕೊಳ್ಳಲಾಗುವುದು. ಎಲ್ಲೆಲ್ಲಿ ಕಂಟೈನ್ ಮೆಂಟ್ ವಲಯ ಮಾಡಲಾಗಿದೆ ಎಲ್ಲಾ ವಿವರ ಪಡೆಯಲಾಗುವುದು ಎಂದರು.

ನಗರದ 580 ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಈಗಾಗಲೇ ಬಿಬಿಎಂಪಿ ಸಭೆ ನಡೆಸಿದೆ. ಆಗ ಬಂದ ಅಭಿಪ್ರಾಯದ ಪ್ರಕಾರ ಒಂದೊಂದು ಕೊರೊನಾ ಪ್ರಕರಣ ಕಂಡು ಬಂದ ಸ್ಥಳಗಳಲ್ಲಿ ಕಂಟೈನ್ ಮೆಂಟ್ ಸೂಕ್ತವಲ್ಲ, ಹೀಗಾಗಿ ಮನೆ ಮುಂದೆ ಪೋಸ್ಟರ್ ಮಾತ್ರ ಅಂಟಿಸುವ ನಿರ್ಧಾರ ಮಾಡಲಾಗಿದೆ. ಇದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆಯೂ ಚರ್ಚೆ ಮಾಡಲಾಗಿದೆ ಎಂದರು.

ಪ್ರತಿದಿನ ಬರುವ ಕೊರೊನಾ ಪ್ರಕರಣಕ್ಕೆ ಜಿಯೋ ಟ್ಯಾಗಿಂಗ್ ಮಾಡಲಾಗುತ್ತಿದೆ. ಅಂದಾಜು ಸಾವಿರ ಪ್ರಕರಣ ಕಂಡುಬಂದರೆ, ಆ ಸಾವಿರ ಮನೆಗಳಿಗೂ ಭೇಟಿ ನೀಡಿ ಮೊಬೈಲ್ ನಲ್ಲಿ ಜಾಗವನ್ನು ಮ್ಯಾಪ್ ನಲ್ಲಿ ಗುರುತಿಸಲಾಗುತ್ತದೆ. ಇದರಿಂದ ಯಾವ ಪ್ರದೇಶದಲ್ಲಿ ಹೆಚ್ಚೆಚ್ಚು ಕೊರೊನಾ ಪ್ರಕರಣ ಕಂಡುಬರುತ್ತಿದೆ ಎಂಬುದು ಜಿಯೋ ಲೊಕೇಶನ್ ನಿಂದ ಗೊತ್ತಾಗಲಿದೆ. ಹೀಗಾಗಿ ಮೂರು ಅಥವಾ ಮೂರಕ್ಕಿಂತ ಹೆಚ್ಚು ಪ್ರಕರಣ ನೂರು ಮೀಟರ್ ವ್ಯಾಪ್ತಿಯೊಳಗೆ ಕಂಡುಬಂದರೆ ಮಾತ್ರ ಆ ಜಾಗವನ್ನು ಕಂಟೈನ್ ಮೆಂಟ್ ಮಾಡಲಾಗುವುದು. ಒಂದು ಅಥವಾ ಎರಡು ಪ್ರಕರಣ ಕಂಡುಬಂದರೆ ಬ್ಯಾರಿಕೇಡಿಂಗ್ ಮಾಡುವ ಅಗತ್ಯ ಇಲ್ಲ ಎಂದರು.

ಪ್ರೈಮರಿ, ಸೆಕೆಂಡರಿ ಸಂಪರ್ಕ, ಕಂಟೈನ್ ಮೆಂಟ್ ವಲಯ, ಕ್ಲಿನಿಕ್, ಆಸ್ಪತ್ರೆಗಳಲ್ಲಿ ಸೋಂಕಿನ ಲಕ್ಷಣ ಇರುವವರಿಗೆ ಕೊರೊನಾ ಸೋಂಕು ಪರೀಕ್ಷೆ ಮುಂದುವರಿಸಲಾಗುವುದು. ಪ್ರತಿದಿನ 25 ಸಾವಿರ ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ. ಹೆಚ್ಚು ಟೆಸ್ಟ್ ಮಾಡಿದಾಗ ಆರಂಭದಲ್ಲಿ ಹೆಚ್ಚು ಕೇಸ್ ಬರಲಿದೆ. ಆದರೆ ಎಲ್ಲರನ್ನೂ ಐಸೋಲೇಟ್ ಮಾಡಿದರೆ ಸೋಂಕು ಹರಡುವುದು ಕಡಿಮೆಯಾಗಲಿದೆ ಎಂದರು.

ಹೋಂ ಐಸೋಲೇಷನ್ ನಲ್ಲಿ ಇರುವವರ ಮನೆಗೆ ಬಿಬಿಎಂಪಿ ತಂಡ ಭೇಟಿ ನೀಡುತ್ತದೆ. ಕುಶಲ ಎಂಬ ಆ್ಯಪ್ ಮೂಲಕ ಸ್ವಸ್ಥ್ ಅನ್ನುವ ಸಂಸ್ಥೆ ಜೊತೆಗೆ ಸಂಪರ್ಕ ಮಾಡಿ, ಆ ಆ್ಯಪ್ ನಿಂದ ವೈದ್ಯರು ಪ್ರತಿದಿನ ಮೂರು ಬಾರಿ ಫೋನ್ ಮಾಡಿ ರೋಗಿಗಳ ಆರೋಗ್ಯ ವಿಚಾರಿಸಿಕೊಳ್ಳುತ್ತಾರೆ. ತೊಂದರೆಗಳಿದ್ರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ನಮಗೆ ಸೂಚನೆ ಬರುತ್ತದೆ. ಇದರಿಂದ ಸಾವಿನ ಪ್ರಮಾಣವೂ ಕಡಿಮೆಯಾಗಲಿದೆ. ಮನೆಮನೆಗೆ ಆಕ್ಸಿಮೀಟರ್, ಮೆಡಿಸಿನ್‌ ಗಳನ್ನು ನಾವು ಹಂಚುತ್ತೇವೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಪಾಲಿಕೆ ವತಿಯಿಂದ ಅಡ್ಮಿಟ್ ಮಾಡಿಸಿದರೆ, ಅವರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಪಾಲಿಕೆಯ ವತಿಯಿಂದ ರೋಗಿಗಳಿಂದ ಹಣ ಕೇಳಿರುವ ಆರೋಪ ಬಂದರೆ ಕ್ರಮ ಕೈಗೊಳ್ಳುತ್ತೇವೆ. ಬಿಬಿಎಂಪಿ ವತಿಯಿಂದ ಟೆಸ್ಟ್ ಮಾಡಲು, ಸಿಸಿಸಿ ಕೇಂದ್ರಕ್ಕೆ ಸೇರಲು ಹಾಗೂ ಆಸ್ಪತ್ರೆ ಸೇರಲು ಜನರಿಗೆ ಯಾವುದೇ ಖರ್ಚಾಗುವುದಿಲ್ಲ ಎಂದರು.

ABOUT THE AUTHOR

...view details