ಬೆಂಗಳೂರು: ಬೆಂಗಳೂರಿನಂಥ ದೇಶದ ಮಹಾನಗರಗಳಲ್ಲಿ ಇನ್ನು ಮುಂದೆ ಮ್ಯಾನ್‌ಹೋಲ್‌ಗಳ ಸ್ವಚ್ಛತೆಗೆ ಆಧುನಿಕ ರೋಬೋಟ್‌ಗಳು ಬಳಕೆಯಾಗಲಿವೆ. ನಗರದಲ್ಲಿ ಬುಧವಾರ ನಡೆದ ಮುನಿಸಿಪಾಲಿಕಾ ಸಮ್ಮೇಳನದಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ರೋಬೋಟ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಈ ರೋಬೋಟ್‌ಗಳನ್ನು ವೀಕ್ಷಿಸಿದ ಜನರು ತಂತ್ರಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮ್ಯಾನ್‌ಹೋಲ್ ಸ್ವಚ್ಛತೆೆಗೆ ಸಫಾಯಿ ಕರ್ಮಚಾರಿಗಳ ಬಳಕೆ ನಿಷೇಧಿಸಿದ ನಂತರ ರೋಬೋಟ್ಗಳ ಆವಿಷ್ಕಾರಕ್ಕೆ ಹಲವು ಕಂಪನಿಗಳು ಮುಂದಾಗಿವೆ. ರೋಬೋಟ್ ಒಮ್ಮೆ ಗುಂಡಿಗಿಳಿದರೆ 30 ಕೆ.ಜಿಯಿಂದ 160 ಕೆ.ಜಿವರೆಗಿನ ತ್ಯಾಜ್ಯ ಹೊರತೆಗೆದು ಯಂತ್ರದ ಹೊಟ್ಟೆಯೊಳಗೆ ತುಂಬುತ್ತದೆ. ಒಳಚರಂಡಿ, ಸಾಮೂಹಿಕ ಶೌಚಾಲಯ, ಮನೆಯ ಶೌಚಗಳು, ಸೇತುವೆ, ಡೆಕ್ ಸ್ವಾಬ್‌ನೊಳಗಿರುವ ತ್ಯಾಜ್ಯಗಳನ್ನು ಇದರಿಂದ ಸ್ವಚ್ಛಗೊಳಿಸಲು ಸಾಧ್ಯವಿದೆ.
ಮಲಗುಂಡಿ ಸ್ವಚ್ಛಗೊಳಿಸುವಾಗ ಪೌರ ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾಗಿರುವ ಅನೇಕ ನಿದರ್ಶನಗಳಿವೆ. ಇಂಥ ಅಮಾನುಷ ಪ್ರಕರಣಗಳನ್ನು ತಡೆಯುವ ದೃಷ್ಟಿಯಿಂದ ಒಳಚರಂಡಿ ಮತ್ತು ಮ್ಯಾನ್‌ಹೋಲ್ ಸ್ಚಚ್ಛತೆಗೆ ರೋಬೋಟ್ ಬಳಕೆ ಅತ್ಯುಪಯುಕ್ತ. ಕಾರ್ಮಿಕರ ಅನಾರೋಗ್ಯ, ಅವಘಡ ತಪ್ಪಿಸಲು ಇದು ಹೆಚ್ಚು ಸಹಕಾರಿಯಾಗಿದೆ. ಕೇರಳದ ಕಂಪನಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದರ ಪ್ರಾತ್ಯಕ್ಷಿಕೆಯನ್ನು ಮುನಿಸಿಪಾಲಿಕಾ ಸಮ್ಮೇಳನದಲ್ಲಿ ನೀಡಲಾಯಿತು.
ವಿದ್ಯುತ್ ಚಾಲಿತ ಹಾಗೂ ಪೆಟ್ರೋಲ್ ಆಧಾರಿತ ರೋಬೋಟ್‌ಗಳು 5 ಲಕ್ಷ ರೂಪಾಯಿಗೆ ದೊರೆಯಲಿದೆ. ನಗರಗಳ ಒಳಚರಂಡಿ ಸ್ವಚ್ಛತೆಗಾಗಿ ಮಹಾನಗರ ಪಾಲಿಕೆಗಳು, ಸ್ಥಳೀಯ ಸಂಸ್ಥೆಗಳು ಅವುಗಳನ್ನು ಖರೀದಿಸಬಹುದು.
ಮ್ಯಾನ್‌ಹೋಲ್ ಫೈಬರ್:ನಗರ, ಗ್ರಾಮೀಣ ಪ್ರದೇಶಗಳ ಜನವಸತಿಗಳಲ್ಲಿ ಯುಜಿಡಿ ಕಾಮಗಾರಿಗಳಿಗೆ ಹಾಗೂ ಮ್ಯಾನ್‌ಹೋಲ್ ಸಿದ್ಧಪಡಿಸಲು ಮೊದಲು ಸಿಮೆಂಟ್ ಸಾಮಗ್ರಿ ಅಳವಡಿಸಲಾಗುತ್ತಿತ್ತು.ಈಗ ಅಂದಾಜು ಎರಡು ಇಂಚಿನಿಂದ ಮೂವತ್ತೆರಡು ಸುತ್ತಳತೆಯ ಫೈಬರ್ ಪೈಪ್ಗಳು ಮಾರುಕಟ್ಟೆಗೆ ಬಂದಿವೆ. ಘನತ್ಯಾಜ್ಯ ನಿರ್ವಹಣೆ, ಘನತ್ಯಾಜ್ಯ ಸಂಸ್ಕರಣಾ ಘಟಕಗಳು, ಕಸ ಸಾಗಣೆಯ ವೈವಿಧ್ಯ ವಾಹನಗಳು, ನೀರು ಶುದ್ಧೀಕರಣ ಘಟಕಗಳು ಮತ್ತಿತರ ವಸ್ತುಗಳು ಸಮ್ಮೇಳನದಲ್ಲಿ ಕಂಡುಬಂದವು.
ಮುನಿಸಿಪಾಲಿಕಾ ಸಮ್ಮೇಳನದ ಕುರಿತು..:ಸುರಕ್ಷಿತ, ಸ್ಮಾರ್ಟ್ ಹಾಗೂ ಸುಸ್ಥಿರ ನಗರಗಳ ಅಭಿವೃದ್ಧಿಗೆ ಅಗತ್ಯ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಮುನಿಸಿಪಾಲಿಕಾ-2023' ಅಂತರರಾಷ್ಟ್ರೀಯ ಸಮ್ಮೇಳನ ನಡೆಯಿತು. ಸಮ್ಮೇಳನವು ನಗರ ಮೂಲಸೌಕರ್ಯ, ಸುಸ್ಥಿತ ಅಭಿವೃದ್ಧಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ, ಸಂವಾದ, ನೀತಿ ನಿರೂಪಣೆಗೆ ವೇದಿಕೆ ಆಗಿತ್ತು. ರಾಜ್ಯದ 216 ನಗರ ಸ್ಥಳೀಯ ಪ್ರತಿನಿಧಿಗಳು, ರಾಜ್ಯ ಮತ್ತು ಕೇಂದ್ರ ಒಳಗೊಂಡಂತೆ ದೇಶಾದ್ಯಂತದ 5,000ಕ್ಕೂ ಹೆಚ್ಚು ಉನ್ನತಮಟ್ಟದ ಪ್ರತಿನಿಧಿಗಳು, 200ಕ್ಕೂ ಹೆಚ್ಚು ಪ್ರದರ್ಶಕರು ಸಮ್ಮೇಳನದಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡರು.
ಇದನ್ನೂಓದಿ:ಟೆಕ್ ಸಮ್ಮಿಟ್ನಲ್ಲಿ ಗಮನಸೆಳೆಯುತ್ತಿರುವ ತಾರೆ ಜಮೀನ್ ಪರ್ನ ಸಂಚಾರಿ ತಾರಾಲಯ