ಬೆಂಗಳೂರು:ರಾಜ್ಯದಲ್ಲಿ ಈ ಭಾರಿ ಮಾವು ಇಳುವರಿ ಕಡಿಮೆಯಾಗಿದೆ. ಹಾಗಾಗಿ ಸ್ವಾಭಾವಿಕವಾಗಿಯೇ ಮಾವುಪ್ರಿಯರು ಪ್ರತಿ ಕೆಜಿ ಮಾವು ಕೊಂಡುಕೊಳ್ಳಲು ಹೆಚ್ಚು ದುಡ್ಡು ಕೊಡಬೇಕು.
ರಾಜ್ಯಾದ್ಯಂತ ಸುರಿದ ಅಕಾಲಿಕ ಮಳೆ ಮಾವಿನ ಹೂಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹಾಗಾಗಿ ಈ ಬಾರಿ ಮಾವು ಫಸಲು ಕಡಿಮೆಯಾಗಲು ಮಳೆರಾಯನ ಅವಕೃಪೆಯೇ ಕಾರಣವಾಗಿದೆ. ಪರಿಣಾಮ ಮಾವು ಬೆಳೆಗಾರರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಜೊತೆಗೆ ಮಾವು ಪ್ರಿಯರ ಕಿಸೆಗೆ ಕತ್ತರಿ ಬೀಳುತ್ತಿದೆ. ಕಳೆದ ವರ್ಷ ಈ ವೇಳೆಗೆ ಹೆಚ್ಚು ಮಾವಿನ ಹಣ್ಣುಗಳು ಮಾರುಕಟ್ಟೆ ಬಂದಿದ್ದವು. ಬೆಳೆ ಹಾಗು ಬೆಲೆ ಎರಡೂ ಲಾಭದಾಯಕವಾಗಿಯೇ ಇತ್ತು. ಆದ್ರೆ ಈ ಬಾರಿ ಸನ್ನಿವೇಶ ವ್ಯತಿರಿಕ್ತವಾಗಿದೆ.
ಮಾವು ಇಳುವರಿ ಕಡಿಮೆ, ಬೆಲೆ ದುಬಾರಿ ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಮಾವಿನ ಹಣ್ಣಿನ ಬೆಲೆ ಸುಮಾರು 60–80 ರೂ ಇದೆ. ರುಚಿಕಟ್ಟಾದ ಜಾತಿಯ ಮಾವಿನ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದ್ದು, ಸುಮಾರು ಒಂದು ಕೆಜಿ ಮಾವಿನ ಹಣ್ಣಿಗೆ 150 ರಿಂದ 200 ರೂಪಾಯಿ ಇದೆ. ಇದು ಬಡ ಮತ್ತು ಮಧ್ಯಮವರ್ಗದ ಮಾವು ಪ್ರಿಯರ ಪಾಲಿಗೆ ಕಹಿ ಅನುಭವ ನೀಡುತ್ತಿದೆ.
ಮಾವಿನ ಹಣ್ಣಿನಲ್ಲಿ ಅನೇಕ ತಳಿಗಳಿವೆ. ದಶೋರಿ, ಬಾದಾಮಿ ಜಾತಿಗೆ ಸೇರಿದ ಮಾವುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸಮಾರು ಕೆ.ಜಿಗೆ 80–150 ರೂ ಇದೆ. ಇತ್ತೀಚಿನ ವರ್ಷಗಳಲ್ಲಿ ಮಾವು ಫಸಲು ಕೂಡಾ ಕುಂಠಿತಗೊಳ್ಳುತ್ತಾ ಸಾಗುತ್ತಿದೆ. ಹೀಗಾಗಿ ಬೆಳೆಗಾರರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ರೈತ ಶಂಕರಪ್ಪ ಆತಂಕ ವ್ಯಕ್ತಪಡಿಸಿದರು.