ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಮಾಡಿದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿದಂತೆ ಈವರೆಗೂ ದಾಖಲಾಗಿರುವ ದೂರುಗಳ ಮೇರೆಗೆ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಹೈಕೋರ್ಟ್, ಸರ್ಕಾರಕ್ಕೆ ನಿರ್ದೇಶಿಸಿದೆ.
ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ದೂರುಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸುತ್ತಿದ್ದು, ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ಘಟನೆ ಸಂಬಂಧ ಪೊಲೀಸರಿಗೆ ಸಲ್ಲಿಸಿರುವ ದೂರುಗಳಲ್ಲಿ ಒಂದೇ ಒಂದು ದೂರನ್ನು ಸಹ ದಾಖಲಿಸಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡ್ಗಿ, ಪೊಲೀಸರು ದೂರುಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಈಗಾಗಲೇ ಸಿಐಡಿಗೆ ವಹಿಸಲಾಗಿದೆ. ಜಿಲ್ಲಾ ದಂಡಾಧಿಕಾರಿ ಪ್ರಕರಣದ ವರದಿ ಸಿದ್ದಪಡಿಸುತ್ತಿದ್ದು ಫೆ.6ರಂದು 176 ಜನರಿಂದ ಸಾಕ್ಷಿಗಳನ್ನು ಸಂಗ್ರಹಿಸುವ ಕೆಲಸ ಮಾಡಲಿದ್ದಾರೆ ಎಂದು ವಿವರಿಸಿದರು. ಜೊತೆಗೆ ಪ್ರಕರಣದ ಸಂಬಂಧ ಜಿಲ್ಲಾ ದಂಡಾಧಿಕಾರಿ ಈವರೆಗೂ ನಡೆಸಿರುವ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು.
ಹೇಳಿಕೆಗಳನ್ನು ದಾಖಲಿಸಿಕೊಂಡ ಪೀಠ, ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿ, ಘಟನೆ ಸಂಬಂಧ ಸಿಸಿಟಿವಿಗಳಲ್ಲಿ ದಾಖಲಾಗಿರುವ ವೀಡಿಯೋ ಮತ್ತು ಪೊಲೀಸರು ಚಿತ್ರೀಕರಿಸಿರುವ ವಿಡಿಯೋಗಳನ್ನು ಸಂರಕ್ಷಿಸಬೇಕು. ವಿಡಿಯೋ ಎಷ್ಟಿದೆ ಅದರಲ್ಲಿರುವ ವಿವರವೇನು ಎಂಬ ಮಾಹಿತಿಯನ್ನು ಪೀಠಕ್ಕೆ ಸಲ್ಲಿಸಬೇಕು. ಘಟನೆ ದಿನ ಖಾಸಗಿ ವ್ಯಕ್ತಿಗಳು ಮತ್ತು ಮಾಧ್ಯಮದವರು ಚಿತ್ರೀಕರಿಸಿರುವ ವಿಡಿಯೋಗಳನ್ನು ಒದಗಿಸುವಂತೆ ಮಂಗಳೂರು ಜಿಲ್ಲಾಧಿಕಾರಿ ಸಾರ್ವಜನಿಕ ಪ್ರಕಟಣೆ ನೀಡಬೇಕು. ಘಟನೆ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದಿನ ದಿನಗಳಲ್ಲಿ ನಡೆಸುವ ತನಿಖೆಯ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿತು.