ಬೆಂಗಳೂರು:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಭೂಭರ್ತಿ ಘಟಕದಿಂದಾದ ಅನಾಹುತದಲ್ಲಿ ನೆಲೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಿಸಲು ಪಾಲಿಕೆಗೆ 14 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಈ ಕುರಿತು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲರು ಲಿಖಿತ ಮಾಹಿತಿ ಸಲ್ಲಿಸಿ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಅಂದಾಜಿಸಲಾಗಿದ್ದ ಒಟ್ಟು 22 ಕೋಟಿ ರೂಪಾಯಿಯಲ್ಲಿ ಈಗಾಗಲೇ 8 ಕೋಟಿ ಬಿಡುಗಡೆ ಮಾಡಲಾಗಿತ್ತು. ಬಾಕಿ ಉಳಿದ 14 ಕೋಟಿ ರೂ.ಗಳನ್ನು ಪಾಲಿಕೆಗೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಸಂತ್ರಸ್ತರ ಅಹವಾಲು ಆಲಿಸಲು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ಆಕ್ಷೇಪಿಸಿ, ಬಿಡುಗಡೆ ಮಾಡಿರುವ ಹಣದ ಜೊತೆ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯಲ್ಲಿ ಕಟ್ಟಡ ಹಾಗೂ ಆಸ್ತಿಗಳನ್ನು ಕಳೆದುಕೊಂಡವರು ಅಹವಾಲು ಸಲ್ಲಿಸಬೇಕು ಎಂದು ಹೇಳಲಾಗಿದೆ. ಆದರೆ, ಶಾಲೆ, ಧಾರ್ಮಿಕ ಸ್ಥಳಗಳು, ಸರ್ಕಾರಿ ಆಸ್ತಿ, ಭಿಕ್ಷುಕರ ಕಾಲೋನಿ ನಾಶವಾಗಿದೆ. 5 ಕಿ.ಮೀ ಸುತ್ತಲಿನ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಕುಡಿಯುವ ನೀರು ಮಲಿನಗೊಂಡಿದೆ. ಈ ಎಲ್ಲ ಅಂಶಗಳನ್ನು ಅಹವಾಲು ಆಲಿಕೆಯಲ್ಲಿ ಪರಿಗಣಿಸಬೇಕು ಎಂದರು. ಪಾಲಿಕೆ ಪರ ವಕೀಲರು ಅ.26ರೊಳಗೆ ಪರಿಷ್ಕೃತ ಸಾರ್ವಜನಿಕ ಪ್ರಕಟಣೆ ಹೊರಡಿಸುವ ಭರವಸೆ ನೀಡಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಈಗಾಗಲೇ ಪರಿಹಾರ ಪಡೆದುಕೊಂಡವರೂ ಮನವಿ ಸಲ್ಲಿಸಬಹುದು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಬೇಕು. ಸಾರ್ವಜನಿಕ ಅಹವಾಲು ಆಲಿಸುವ ವೇಳೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಜರಿದ್ದು, ಪ್ರಕ್ರಿಯೆಯ ಮೇಲ್ವಿಚಾರಣೆ ವಹಿಸಬೇಕು ಎಂದು ಸೂಚಿಸಿತು. ಅಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ವರದಿ ಸಲ್ಲಿಸಲು ಕೆಎಸ್ಪಿಸಿಬಿ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ನ.9ಕ್ಕೆ ಮುಂದೂಡಿತು.