ಬೆಂಗಳೂರು: ಮಂಗಳೂರಿನ ಕಂಕನಾಡಿ ಬಳಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಶಾರೀಕ್ ಆರೋಗ್ಯದಲ್ಲಿ ಕೊನೆಗೂ ಸುಧಾರಣೆ ಕಂಡುಬಂದಿದೆ. ಕಳೆದ ಒಂದೂವರೆ ತಿಂಗಳುಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಸದ್ಯದಲ್ಲೇ ಡಿಸ್ಚಾರ್ಜ್ ಮಾಡಲು ಸಿದ್ಧತೆಗಳು ನಡೆದಿವೆ.
ಡಿಸ್ಚಾರ್ಜ್ ಬಳಿಕ ಎನ್ಐಎ ವಶಕ್ಕೆ: ಸ್ಫೋಟದ ಸಂದರ್ಭದಲ್ಲಿ ಶೇ 25 ರಷ್ಟು ಸುಟ್ಟ ಗಾಯಗಳಿಂದ ಬಚಾವಾಗಿದ್ದ ಶಾರೀಕ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಫೋಟದ ಪರಿಣಾಮದಿಂದಾಗಿ ಶಾರೀಕ್ ಮುಖ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ. ಕಳೆದ ಒಂದೂವರೆ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಶಾರೀಕ್ ಭಾಗಶಃ ಗುಣಮುಖನಾಗಿದ್ದು, ಬಹುತೇಕ ಸುಟ್ಟ ಗಾಯಗಳು ವಾಸಿಯಾಗಿವೆ. ಸಣ್ಣ ಪುಟ್ಟ ಗಾಯಗಳಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಈಗಾಗಲೇ ಚಿಕಿತ್ಸೆಯ ಜೊತೆ ಜೊತೆಗೆ ಬಹುತೇಕ ವಿಚಾರಣೆ ನಡೆಸಿರೋ ಎನ್ಐಎ ಅಧಿಕಾರಿಗಳ ತಂಡ ಮುಂದಿನ ವಾರವೇ ಶಾರೀಕ್ನನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ವಶಕ್ಕೆ ಪಡೆಯಲಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು: ನವೆಂಬರ್ 19ರಂದು ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದ್ದ ಸ್ಫೋಟದಲ್ಲಿ ಆರೋಪಿ ಶಾರೀಕ್ ಸಹ ಗಾಯಗೊಂಡಿದ್ದ. ಘಟನಾ ಸ್ಥಳದಲ್ಲಿ 5 ಲೀಟರ್ ಕುಕ್ಕರ್, 9 ವೋಲ್ಟ್ ನ 3 ಬ್ಯಾಟರಿಗಳು, ಡ್ಯಾಮೇಜ್ಡ್ ಸರ್ಕಿಟ್ ಸೇರಿದಂತೆ ಎಲೆಕ್ಟ್ರಿಕ್ ಉಪಕರಣಗಳನ್ನ ವಶಪಡಿಸಿಕೊಳ್ಳಲಾಗಿತ್ತು. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ದೊಡ್ಡ ಪ್ರಮಾಣದ ಸಂಚು ರೂಪಿಸಿರುವುದು ಬಯಲಾಗಿತ್ತು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಶಾರೀಕ್ನನ್ನು ಡಿಸೆಂಬರ್ 16ರಂದು ರಾತ್ರಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಕರೆತಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನವೆಂಬರ್ 19ರಂದು ಮಂಗಳೂರಿನ ಗರೋಡಿಯಲ್ಲಿ ಶಂಕಿತ ಉಗ್ರ ಶಾರೀಕ್ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಕೊಂಡೊಯ್ಯುತ್ತಿದ್ದಾಗ ಸ್ಫೋಟಗೊಂಡಿತ್ತು. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ ಮಾಡಲಾಗಿತ್ತು. ಸ್ಫೋಟ ಪ್ರಕರಣದಲ್ಲಿ ಗಾಯಾಳು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಕೂಡ ಗಾಯಗೊಂಡಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಮೊಹಮದ್ ಶಾರೀಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿ. 24 ವರ್ಷದ ಈತ ಈಗಾಗಲೇ ಮೂರು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ. ಈಗ ಮಂಗಳೂರು ಸ್ಫೋಟ ಪ್ರಕರಣದಲ್ಲೂ ಎ1 ಆರೋಪಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಐಸಿಸ್ ಸೇರುವ ಉದ್ದೇಶವನ್ನು ಹೊಂದಿದ್ದ. ಇದರ ಭಾಗವಾಗಿ ಆತ ಇಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದ. ಕರ್ನಾಟಕ ಮಾತ್ರವಲ್ಲದೆ, ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲೂ ಈತ ಸಂಚರಿಸಿದ್ದ ಮಾಹಿತಿಯನ್ನು ಈಗಾಗಲೇ ಎನ್ಐಎ ತನಿಖಾ ತಂಡ ಕಲೆ ಹಾಕಿದೆ. ಸದ್ಯ ಈತ ಗುಣಮುಖ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಎನ್ಐಎ ಅಧಿಕಾರಿಗಳ ತಂಡ ಆತನನ್ನು ವಶಕ್ಕೆ ಪಡೆಯಲಿದ್ದು, ಪ್ರಕರಣ ಸಂಬಂಧ ಆತನನ್ನು ತೀವ್ರ ತನಿಖೆಗೆ ಒಳಪಡಿಸಲಿದೆ.
ಇದನ್ನೂ ಓದಿ:ಮುಂದುವರಿದ ಅಂಗನವಾಡಿ ನೌಕರರ ಅನಿರ್ಧಿಷ್ಟಾವಧಿ ಪ್ರತಿಭಟನೆ.. ಸರ್ಕಾರದ ವಿರುದ್ಧ ಆಕ್ರೋಶ