ಬೆಂಗಳೂರು :ಮಂಗಳೂರು ಮಹಾನಗರ ಪಾಲಿಕೆ ಪಚ್ಚನಾಡಿಯ ಘನತ್ಯಾಜ್ಯ ಭೂಭರ್ತಿ ಘಟಕದಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯುವುದನ್ನು ಮುಂದುರಿಸಿರುವ ಹಿನ್ನೆಲೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಸ್ತುಸ್ಥಿತಿ ವರದಿ ನೀಡುವಂತೆ ಹೈಕೋರ್ಟ್ ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಪರಿಸರ ಅಧಿಕಾರಿಗೆ ನಿರ್ದೇಶಿಸಿದೆ.
ಮಹಾನಗರ ವ್ಯಾಪ್ತಿಯ ಪಚ್ಚನಾಡಿಯಲ್ಲಿನ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾದ ಅನಾಹುತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದಿಸಿ, ಭೂಭರ್ತಿ ಘಟಕದಲ್ಲಿ ಈಗಲೂ ತ್ಯಾಜ್ಯ ಸುರಿಯಲಾಗುತ್ತಿದೆ.
ನಿನ್ನೆ ಮಂಗಳೂರಿನಲ್ಲಿ ಅಕಾಲಿಕ ಮಳೆ ಬಂದಿದೆ. ಕೆಲ ತಿಂಗಳಲ್ಲೇ ಮುಂಗಾರು ಸಹ ಆರಂಭವಾಗಲಿದೆ. ಒಂದೊಮ್ಮೆ ಕಸ ಸುರಿಯುವುದು ಮುಂದುವರಿದು, ಮಳೆ ಪ್ರಾರಂಭವಾದರೆ ಮತ್ತೆ ಅನಾಹುತವಾಗುವ ಸಾಧ್ಯತೆಗಳಿವೆ. ಸಮಸ್ಯೆ ಗಂಭೀರವಾಗಿದ್ದು, ನ್ಯಾಯಾಲಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.