ಕರ್ನಾಟಕ

karnataka

ETV Bharat / state

'ಮಂಡ್ಯದ ಗಾಂಧಿ ' ಎಂದೇ ಹೆಸರು ಗಳಿಸಿದ್ದ ಮಾಜಿ ಸ್ಪೀಕರ್ ಕೃಷ್ಣ ರಾಜ್ಯ ಕಂಡ ಅಪರೂಪದ ರಾಜಕಾರಣಿ...! - ಮಂಡ್ಯದ ಗಾಂಧಿ ಖ್ಯಾತಿಯ ಕೃಷ್ಣ ನಿಧನ ಸುದ್ದಿ

ಸುಮಾರು 40 ವರ್ಷಗಳ ಕಾಲ ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ, ಅವರಿಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಸಾಮಾನ್ಯರಂತೆ ಬಸ್‍ನಲ್ಲೇ ಪ್ರಯಾಣಿಸುತ್ತಿದ್ದರು.

krishna
krishna

By

Published : May 21, 2021, 6:13 PM IST

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸರಳ, ಸಜ್ಜನ, ಪ್ರಾಮಾಣಿಕ ರಾಜಕಾರಣಿಯಾಗಿ ಬದುಕಿ ಬಾಳಿದ ಕೆಲವೇ ಕೆಲ ಮಂದಿಯಲ್ಲಿ ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ ಸಹ ಒಬ್ಬರು.

ರಾಜ್ಯ ಕಂಡ ಅಪರೂಪದ ರಾಜಕಾರಣಿ. "ಮಂಡ್ಯದ ಗಾಂಧಿ" ಎಂದೇ ಹೆಸರು ಗಳಿಸಿದ್ದರು. ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಕೃಷ್ಣ ಅವರು, ಮೂರು ಬಾರಿ ಶಾಸಕರಾಗಿ (1985, 1994 ಮತ್ತು 2004 ), 1996 ರಲ್ಲಿ ಮಂಡ್ಯ ಜಿಲ್ಲೆ ಸಂಸದರಾಗಿ ಆಯ್ಕೆಯಾಗಿದ್ದರು.

1988 ರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾಗಿ ಕೆಲಸ ಮಾಡಿದ್ದರು. 2006 ರಿಂದ 2008 ರವರೆಗೆ ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಆಗ ಜೆಡಿಎಸ್​​ನಲ್ಲಿದ್ದರು.1978 ರಲ್ಲಿ ತಾಲೂಕು ಬೋರ್ಡ್‌ ಚುನಾವಣೆಯ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದ ಅವರು, 1985ರಲ್ಲಿ ಪ್ರಥಮ ಬಾರಿಗೆ ಜನತಾ ಪಕ್ಷದಿಂದ ವಿಧಾನಸಭೆಯನ್ನು ಕೇವಲ 32 ಸಾವಿರ ರೂ. ಖರ್ಚು ಮಾಡಿ ಪ್ರವೇಶಿಸಿದ್ದರು. ಸುಮಾರು 40 ವರ್ಷಗಳ ಕಾಲ ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಅವರು, ಅವರಿಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಸಾಮಾನ್ಯರಂತೆ ಬಸ್‍ನಲ್ಲೇ ಪ್ರಯಾಣಿಸುತ್ತಿದ್ದರು.

2012 ರಲ್ಲಿ ಟಿಕೆಟ್​ ವಂಚಿತ, 2017ರಲ್ಲಿ ನಿವೃತ್ತಿ

2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣಗೌಡ ಅವರ ( ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ) ಜೆಡಿಎಸ್‌ ಪ್ರವೇಶದಿಂದಾಗಿ ಟಿಕೆಟ್‌ ವಂಚಿತರಾಗಿದ್ದ ಕೃಷ್ಣ ಅವರು, ನಂತರದ ದಿನಗಳಲ್ಲಿ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೆ ಕಟ್ಟು ಬಿದ್ದು ಕಾಂಗ್ರೆಸ್‌ ಸೇರಿದ್ದರು. ಆದರೆ ಕಾಂಗ್ರೆಸ್‌ನಲ್ಲಿಯೂ ಸರಿಯಾದ ರೀತಿಯಲ್ಲಿ ತೊಡಗಿಸಿಕೊಳ್ಳಲಾಗದೆ ಕಳೆದ 2017 ರಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರು.

ರಾಜಕಾರಣದ ಬಗ್ಗೆ ಕೃಷ್ಣ ಹೇಳಿದ್ದಿಷ್ಟು

ಕೃಷ್ಣ ಅವರು ರಾಜಕೀಯ ನಿವೃತ್ತಿ ಪಡೆದ ಸಂದರ್ಭದಲ್ಲಿ ಹೇಳಿದ ಮಾತು ಇಂದಿನ ರಾಜಕಾರಣಿಗಳಿಗೆ ಪಾಠವಾಗಿತ್ತು. ಅಂದು ಅವರು ಹೇಳಿದಿಷ್ಟು : " ಇತ್ತೀಚೆಗೆ ಮತದಾರರಿಗೆ ರಾಜಕಾರಣಿಗಳೇ ಹಣ ನೀಡುವ ಕೆಟ್ಟ ಚಾಳಿ ಆರಂಭಿಸಿದ್ದಾರೆ. ಇದನ್ನು ಕಂಡು ನನಗೆ ಬೇಸರವಾಗಿದೆ. ಪವಿತ್ರವಾದ ಮತ ಮಾರಾಟದ ವಸ್ತುವಾಗಿರುವುದು ನಮ್ಮಂತಹ ಸರಳ ರಾಜಕಾರಣಿಗಳಿಗೆ ಒಗ್ಗುವುದಿಲ್ಲ. ಹಾಗಾಗಿ ಇಂತಹ ಕಲುಷಿತ ರಾಜಕಾರಣದಲ್ಲಿ ಮುಂದುವರೆಯಲು ನನಗೆ ಇಷ್ಟವಾಗುತ್ತಿಲ್ಲ. ಹಾಗಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದೇನೆ. ತಾಲೂಕಿನ ಜನತೆ ರಾಜಕೀಯದಲ್ಲಿ 40 ವರ್ಷ ನನ್ನ ಮೇಲಿಟ್ಟ ನಂಬಿಕೆ, 'ಮಂಡ್ಯದ ಗಾಂಧಿ' ಎಂದು ತೋರಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ " ಎಂದು ಭಾವುಕರಾಗಿ ಹೇಳಿದ್ದರು.

ತಮ್ಮ ರಾಜಕೀಯ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ ಕೃಷ್ಣ ಅವರು ಇನ್ನಷ್ಟು ದಿನ ಸಕ್ರಿಯ ರಾಜಕಾರಣದಲ್ಲಿ ಇರಬೇಕಿತ್ತು ಎಂಬುದು ಕಾರ್ಯಕರ್ತರು, ಬೆಂಬಲಿಗರ ಆಸೆಯಾಗಿತ್ತು. ಆದರೆ, ಅವರ ಆರೋಗ್ಯ ಅದಕ್ಕೆ ಸ್ಪಂದನೆ ನೀಡಲಿಲ್ಲ.

ABOUT THE AUTHOR

...view details