ಬೆಂಗಳೂರು/ಮಂಡ್ಯ:ಕೊನೆಗೂ ಪಕ್ಷಪಾತದ ಆರೋಪಕ್ಕೊಳಗಾಗಿದ್ದ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀಯವರನ್ನು ಚುನಾವಣಾ ಆಯೋಗ ಎತ್ತಂಗಡಿ ಮಾಡಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಸರ್ಕಾರ ಮಂಜುಶ್ರೀಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಅವರ ಸ್ಥಾನಕ್ಕೆ ಪಿ.ಸಿ.ಜಾಫರ್ ಅವರನ್ನು ನಿಯೋಜಿಸಲಾಗಿದೆ. ಆದರೆ, ಮಂಜುಶ್ರೀಗೆ ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿದೆ.
ನಿಖಿಲ್ ಕುಮಾರಸ್ವಾಮಿ ನಾಮಪತ್ರದಲ್ಲಿ ನ್ಯೂನತೆ ಇದ್ದರೂ ಮಂಡ್ಯ ಚುನಾವಣಾಧಿಕಾರಿ ಮಂಜುಶ್ರೀ ಪಕ್ಷಪಾತ ನಡೆಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಸುಮಲತಾ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ, ಪ್ರಾಥಮಿಕ ತನಿಖೆಯನ್ನೂ ನಡೆಸಿತ್ತು. ಇದೀಗ ಆಯೋಗ ಡಿಸಿ ಮಂಜುಶ್ರೀ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮಂಜುಶ್ರೀ ವಿರುದ್ಧ ಕೇಳಿಬಂದಿದ್ದ ಆರೋಪ ಏನು?:
ನಿಖಿಲ್ ಚರಾಸ್ತಿ ಹಾಗೂ ಸ್ಥಿರಾಸ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಿದ್ದರೂ ಚುನಾವಣಾಧಿಕಾರಿ ಮಂಜುಶ್ರೀ ಅವರು ನಿಖಿಲ್ ಅವರ ನಾಮಪತ್ರ ಸ್ವೀಕರಿಸಿದ್ದಾರೆ ಎಂಬುದು ಸುಮಲತಾರ ಬಲವಾದ ಆರೋಪ.ನಾಮಪತ್ರ ಪರಿಶೀಲನೆ ಪ್ರಕ್ರಿಯೆಯ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲಾಗಿದೆ ಎಂಬ ಆರೋಪವೂ ಅವರ ಮೇಲಿತ್ತು.
ಇತ್ತೀಚೆಗಷ್ಟೇ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ವರ್ಗಾವಣೆ ಮಾಡಲಾಗಿತ್ತು. ಜತೆಗೆ ಮಂಡ್ಯ ಲೋಕಸಭಾ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿತ್ತು.