ಬೆಂಗಳೂರು:ನವೆಂಬರ್ 25 ರಿಂದ ಇಲ್ಲಿಯವರೆಗೆ ರಾಜ್ಯಕ್ಕೆ ಬಂದಿರುವರನ್ನು ಕಡ್ಡಾಯವಾಗಿ 28 ದಿನ ಅವರವರ ಮನೆಗಳಲ್ಲೇ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ. ಈಗಾಗಲೇ ಬಂದು 14 ದಿನ ಆಗಿದ್ದರೆ ಅವರಿಗೆ 21 ದಿನಗಳ ಸೆಲ್ಫ್ ಕ್ವಾರಂಟೈನ್ ವಿಧಿಸಲಾಗುತ್ತದೆ. 14 ದಿನದಿಂದ ಈಚೆಗೆ ಬಂದಿರುವವರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಲಿದೆ. ರೋಗಲಕ್ಷಣ ಇರುವವರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.
14 ಸಾವಿರ ಜನ ಬ್ರಿಟನ್ನಿಂದ ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆ ನೀಡಿದ್ದರು. ಆದರೆ ನಮ್ಮ ಸರ್ಕಾರಕ್ಕೆ ಸೋಂಕಿತರ ಸಂಖ್ಯೆ, ಮೃತರ ಸಂಖ್ಯೆ, ವಿದೇಶಿ ಪ್ರಯಾಣಿಕರ ಸಂಖ್ಯೆ ಮರೆಮಾಚಿ ಯಾವ ಸಾಧನೆ ಮಾಡುವ ಪ್ರಮೇಯ ಇಲ್ಲ. ಸಂಖ್ಯೆ ಮರೆಮಾಚುವುದು ಏನೂ ಇಲ್ಲ. ಹೇಳಿಕೆ ಕೊಡುವಾಗ ಸರಿಯಾಗಿ ಮಾಹಿತಿ ಕಲೆಹಾಕಿ ಎಂದು ತಿರುಗೇಟು ನೀಡಿದರು.