ಬೆಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಸಿಸಿಬಿಯ ರೌಡಿ ನಿಗ್ರಹದಳದ ಅಧಿಕಾರಿಗಳ ಸೂಚನೆಯ ಮೇರೆಗೆ ಆರೋಪಿಯನ್ನು ಹಿಡಿಯಲು ಹೋಗಿದ್ದ ಪೊಲೀಸ್ ಹೆಡ್ಕಾನ್ಸ್ಟೆಬಲ್ಗೆ ಆರೋಪಿ ಚಾಕುವಿನಿಂದ ಇರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೈಯ್ಯದ್ ಸಮೀವುಲ್ಲಾ ಖಾನ್ ಎಂಬವರು ಹಲ್ಲೆಗೊಳಗಾದ ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್. ಸೈಯ್ಯದ್ ಸಮೀವುಲ್ಲಾ ನೀಡಿದ ದೂರಿನ ಮೇರೆಗೆ ಆರೋಪಿ ಹಸನ್ ಖಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಲಾಗಿದೆ.
ಭಾರತೀನಗರ, ಡಿ.ಜೆ.ಹಳ್ಳಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ, ಕೊಲೆಯತ್ನ ಸೇರಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ, ಜೈಲಿಗೆ ಹೋಗಿದ್ದ. ಜಾಮೀನು ಪಡೆದು ಹೊರಬಂದು ಸ್ಥಳೀಯ ಭೂ ವ್ಯಾಜ್ಯಗಳಲ್ಲಿ ಭಾಗಿಯಾಗುತ್ತಿದ್ದ. ಇದೇ ತಿಂಗಳು 12ರಂದು ಸಿಸಿಬಿಯ ರೌಡಿ ನಿಗ್ರಹದಳದ (ಪೂರ್ವ) ಎಸಿಪಿ ಪುಟ್ಟಸ್ವಾಮಿಗೌಡ ನೇತೃತ್ವದ ತಂಡ ಪ್ರಕರಣವೊಂದರಲ್ಲಿ ಹಸನ್ ಎಂಬಾತ ಬೇಕಾಗಿದ್ದು, ಈತ ಶಿವಾಜಿನಗರ ಬಳಿ ಇರುವ ಮಾಹಿತಿ ತಿಳಿದಿತ್ತು.
ಸ್ಥಳೀಯ ನಿವಾಸಿಯಾಗಿದ್ದ ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಸಮೀವುಲ್ಲಾ ಎಂಬವರಿಗೆ ಕರೆ ಮಾಡಿದ ಸಿಸಿಬಿ ಅಧಿಕಾರಿಗಳು ಹಸನ್ ಎಂಬಾತ ಪ್ರಕರಣವೊಂದರ ಆರೋಪಿಯಾಗಿದ್ದು, ಆತ ಶಿವಾಜಿನಗರ ಬಳಿ ಅವಿತಿದ್ದಾನೆ. ನಾವು ಸ್ಥಳಕ್ಕೆ ಬರುವುದು ತಡವಾಗಲಿದ್ದು, ಆರೋಪಿಯನ್ನು ಹಿಡಿಯುವಂತೆ ಸೂಚಿಸಿದ್ದರು. ಇದರಂತೆ ಹೆಡ್ಕಾನ್ಸ್ಟೆಬಲ್ ಸ್ಥಳಕ್ಕೆ ಹೋಗಿ ಆರೋಪಿಯನ್ನು ಪ್ರಶ್ನಿಸಿದ್ದರು. ಮಾತನಾಡುತ್ತಿರುವಾಗಲೇ ಆರೋಪಿ ಏಕಾಏಕಿ ತನ್ನ ಬಳಿಯಿದ್ದ ಚಾಕುವಿನಿಂದ ಹೆಡ್ಕಾನ್ಸ್ಟೆಬಲ್ ಕೈಗೆ ಇರಿದಿದ್ದಾನೆ. ನಂತರ ಆರೋಪಿಯನ್ನು ಸ್ಥಳೀಯರ ಸಹಾಯದಿಂದ ಹಿಡಿದು ಸಿಸಿಬಿಗೆ ಒಪ್ಪಿಸಲಾಗಿತ್ತು.