ಬೆಂಗಳೂರು: ಆನ್‌ಲೈನ್ ಮಾರ್ಕೆಟ್ ತಾಣದಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಬಳಸಿದ ಹಾಸಿಗೆಯನ್ನು ಮಾರಾಟ ಮಾಡಲು ಯತ್ನಿಸಿದ 39 ವರ್ಷದ ವ್ಯಕ್ತಿಯೊಬ್ಬರು 68 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿಸೆಂಬರ್ 9ರಂದು ಎಚ್‌ಎಸ್‌ಆರ್ ಲೇಔಟ್ ನಿವಾಸಿಯೊಬ್ಬರು ನೀಡಿರುವ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 419 (ವಂಚನೆ) ಮತ್ತು ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: ದೂರುದಾರ ವ್ಯಕ್ತಿ ತನ್ನ ಹಾಸಿಗೆಯನ್ನು ಮಾರಾಟ ಮಾಡುವ ಉದ್ದೇಶದಿಂದ ಆನ್‍ಲೈನ್ ಮಾರಾಟ ತಾಣದಲ್ಲಿ ಫೋಟೋಗಳ ಸಹಿತ ಪ್ರಕಟಿಸಿ, ಅದಕ್ಕೆ ಜೊತೆಗೆ 15,000 ರೂಪಾಯಿ ಬೆಲೆಯನ್ನು ಉಲ್ಲೇಖಿಸಿದ್ದರು. ಡಿಸೆಂಬರ್ 6ರಂದು ಸಂಜೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಇಂದಿರಾನಗರದ ಫರ್ನಿಚರ್ ಅಂಗಡಿಯೊಂದರ ಮಾಲೀಕ ರೋಹಿತ್ ಮಿಶ್ರಾ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೇ, ಹಾಸಿಗೆಯನ್ನು ಖರೀದಿಸಲು ಆಸಕ್ತಿಯಿರುವುದಾಗಿ ತಿಳಿಸಿದ್ದ.
ಬೆಲೆ ನಿಗದಿಪಡಿಸಿದ ಬಳಿಕ ಡಿಜಿಟಲ್ ಪಾವತಿ ಅಪ್ಲಿಕೇಶನ್ ಮೂಲಕ ಹಣವನ್ನು ತಮ್ಮ ಖಾತೆಗೆ ಕಳುಹಿಸುವಂತೆ ದೂರುದಾರ ವ್ಯಕ್ತಿ ಸೂಚಿಸಿದ್ದರು. ಒಂದು ನಿಮಿಷದ ನಂತರ ಕರೆ ಮಾಡಿದ್ದ ಅದೇ ವ್ಯಕ್ತಿ 'ನಿಮ್ಮ ಯುಪಿಐ ಐಡಿಗೆ ಹಣವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ನೀವೇ 5 ರೂಪಾಯಿ ಕಳುಹಿಸಿ, ನಾನು ಹಿಂದಿರುಗಿ ಕಳುಹಿಸುತ್ತೇನೆ' ಎಂದಿದ್ದ. ಅದರಂತೆ ದೂರುದಾರರು 5 ರೂಪಾಯಿ ಕಳುಹಿಸಿದಾಗ ಪ್ರತಿಯಾಗಿ ಆರೋಪಿ 10 ರೂ.ಗಳನ್ನು ಕಳುಹಿಸಿದ್ದ.
ನಂತರ ಮತ್ತೊಮ್ಮೆ ಕರೆ ಮಾಡಿದ್ದ ಆರೋಪಿ ಇದೇ ರೀತಿ ಕಾರಣ ನೀಡಿ 5,000 ರೂ. ಹಣ ಪಡೆದ ನಂತರ, ಆರೋಪಿ 10,000 ರೂ. ಕಳುಹಿಸಿದ್ದ. ಮಗದೊಮ್ಮೆ 7,500 ರೂ.ಗಳನ್ನು ಕಳುಹಿಸುವಂತೆ ತಿಳಿಸಿ 15,000 ರೂ.ಗಳನ್ನು ವಾಪಸ್ ಕಳುಹಿಸುವುದಾಗಿ ಹೇಳಿದ್ದ. ಆದರೆ ಆಕಸ್ಮಿಕವಾಗಿ ತನ್ನ ಖಾತೆಗೆ 30,000 ರೂ.ಗಳನ್ನು ಕಳುಹಿಸಿದ್ದೇನೆ. ಅದನ್ನು ಮರಳಿ ಕಳುಹಿಸಿ ಎಂದು ಒಂದು ಲಿಂಕ್ ಕಳುಹಿಸಿದ್ದ ಆರೋಪಿ ಒಟಿಪಿ ಪಡೆದುಕೊಂಡಿದ್ದ. ಇದಾದ ಬಳಿಕ ದೂರುದಾರ ವ್ಯಕ್ತಿ ತನ್ನ ಖಾತೆಯಿಂದ ಹಂತ ಹಂತವಾಗಿ ಹಣವನ್ನು ಕಳೆದುಕೊಂಡಿದ್ದಾರೆ. ವಂಚನೆಗೊಳಗಾದ ವ್ಯಕ್ತಿ ಒಟ್ಟು 68.6 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ದೂರು ನೀಡಿದ್ದು, ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದೇಶದಲ್ಲಿ ಪ್ರತಿ ನಿಮಿಷಕ್ಕೆ 84 ಸೈಬರ್ ವಂಚನೆ ಪ್ರಕರಣ ದಾಖಲು