ಬೆಂಗಳೂರು: ಪ್ರೇಯಸಿ ಬೇರೊಬ್ಬನ ಜೊತೆ ಸುತ್ತಾಡುವುದನ್ನು ಕಂಡು ಕೋಪಗೊಂಡ ಪಾಗಲ್ ಪ್ರೇಮಿ ಆಕೆಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ದರೋಡೆ ಎಸಗಿರುವ ಘಟನೆ ನಡೆದಿದೆ.
ಇನ್ನು ಕೆಲ ದಿನಗಳ ಹಿಂದೆ ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರನ್ನು ತಡೆದು ಹಗಲು ದರೋಡೆ ನಡೆಯುತ್ತಿದೆ ಎಂಬ ದೂರು ದಾಖಲಾಗಿತ್ತು. ಈ ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಪಾಗಲ್ ಪ್ರೇಮಿ ಜಾಕೀರ್ ಹುಸೇನ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆ ಮಾಡಿದ ಪಾಗಲ್ ಪ್ರೇಮಿ ಮಾ. 13 ರಂದು ಸುಜುಕಿ ಆಕ್ಸೇಸ್ ಸ್ಕೂಟರ್ನಲ್ಲಿ ಬಂದು ಯುವತಿಗೆ ಜೀವ ಬೇದರಿಕೆ ಹಾಕಿ ಹಣ ಮತ್ತು ಚಿನ್ನ ಕಸಿದುಕೊಂಡು ಪರಾರಿಯಾಗಿದ್ದರು. ಸದ್ಯ ಆರೋಪಿಗಳಾದ ಜಾಕೀರ್ ಹುಸೇನ್, ಶಬಾಸ್ ಖಾನ್, ಫಾಜಿಲ್ ಎನ್ನುವವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಘಟನೆಯ ಹಿನ್ನೆಲೆ ಏನೆಂಬುದು ಪೊಲೀಸರಿಗೆ ನಿಖರವಾಗಿರಲಿಲ್ಲ. ಬಳಿಕ ತನಿಖೆ ಸಂದರ್ಭದಲ್ಲಿ ಪಾಗಲ್ಪ್ರೇಮಿ ಜಾಕಿರ್ ಹುಸೇನ್ ಸತ್ಯಾಂಶ ಹೊರಹಾಕಿದ್ದಾನೆ. ತನ್ನ ಪ್ರೇಯಸಿ ವಿಚಾರದಲ್ಲಿ ಅಸಮಾಧಾನಗೊಂಡು ಇಂತಹ ಅಪರಾಧ ಎಸಗಲು ನಿರ್ಧರಿಸಿದ್ದಾನೆ ಎಂದು ಹೇಳಿದ್ದಾನೆ. ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೆಯವನ ಜೊತೆ ಸುತ್ತಾಡುತ್ತಿರುವುದನ್ನು ಸಹಿಸದೇ ದರೋಡೆ ಕೃತ್ಯಕ್ಕೆ ಕೈ ಹಾಕಿದ್ದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಲು ಪಶ್ಚಿಮ ಬಂಗಾಳಕ್ಕೆ ತೆರಳಬೇಕಿತ್ತು. ಈ ಬಳಿಕ ಗೆಳತಿ ಜೊತೆ ಜಗಳವಾಡಿಕೊಂಡ ಕಾರಣ ಸುಲಿಗೆಗೆ ಕೈ ಹಾಕಿದ್ದ ಜಾಕೀರ್ ಯುವತಿಯನ್ನು ಬೇರೊಬ್ಬ ಯುವಕನ ಜೊತೆ ನೋಡಿ ಕೋಪಗೊಂಡಿದ್ದ. ಇದೇ ಕಾರಣದಿಂದ ಮಾರ್ಚ್ 13 ರಂದು ಚಂದ್ರಾ ಲೇಔಟ್ನ ಭೈರವೇಶ್ವರ ನಗರ 9ನೇ ಕ್ರಾಸ್ ಬಳಿ ಬರುವುದನ್ನ ಕಾದು ಯುವತಿಯನ್ನು ಅಡ್ಡಗಟ್ಟಿ ಆರೋಪಿಗಳು ದರೋಡೆ ಮಾಡಿದ್ದರು ಎನ್ನುವ ಮಾಹಿತಿ ದೊರೆತಿದೆ.
ಸದ್ಯ ಬಂಧಿತರಿಂದ 3 ಲಕ್ಷ ಬೆಲೆಯ 102 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.