ಬೆಂಗಳೂರು:ನಿತ್ಯ ಮದ್ಯಪಾನ ಮಾಡಿ ಬಂದು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಯನ್ನು ಆತನ ಪುತ್ರನೇ ಕೊಲೆ ಮಾಡಿರುವ ಘಟನೆ ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡ ಚೌಡಪ್ಪ ಎಂಬಾತ ಚಿಕ್ಕಬಾಣವಾರದ ಬಳಿ ಖಾಸಗಿ ಬ್ಯಾಂಕಿನ ನೌಕರನಾಗಿದ್ದರು. ಆದರೆ, ಜನವರಿ 28ರ ರಾತ್ರಿ ಮನೆಯಲ್ಲಿ ನಿದ್ದೆಗೆ ಜಾರಿದ್ದವ ಮುಂಜಾನೆ ಸಾವನ್ನಪ್ಪಿದ್ದ.
ಕುಡಿದು ಬಂದು ಕಿರುಕುಳ ಕೊಡ್ತಿದ್ದ ಅಪ್ಪನನ್ನೇ ಕೊಲೆಗೈದ ಪುತ್ರ.. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹದ ಮೇಲಿದ್ದ ಗಾಯದ ಗುರುತು ಕಂಡು ಅನುಮಾನಾಸ್ಪದ ಸಾವಿನ ಹಿನ್ನೆಲೆ ಕೇಸ್ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ರು. ನಂತರ ಮನೆಯ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದಾಗ, ಘಟನೆ ನಡೆದ ರಾತ್ರಿ ಎಂದಿನಂತೆ ತಂದೆ ದೊಡ್ಡ ಚೌಡಪ್ಪ ಮದ್ಯ ಸೇವಿಸಿ ಬಂದು ತಾಯಿ ತಿಪ್ಪಮ್ಮ ಮತ್ತು 2ನೇ ಪುತ್ರ ಗಹನ್ಗೆ ಕಿರುಕುಳ ನೀಡಿದ್ದನಂತೆ.
ನಿತ್ಯ ಕಿರುಕುಳ ತಾಳಲಾರದೆ ಮಗನಿಗೂ ತಂದೆ ವಿರುದ್ಧ ರೋಸಿ ಹೋಗಿದ್ದ. ಜನವರಿ 28 ರ ರಾತ್ರಿ ಅಪ್ಪ ಹಾಗೂ ಮಗನ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ಮೊದಲಿಗೆ ತಾಯಿ ಬಿಡಿಸಿ ನಿದ್ದೆಗೆ ಜಾರಿದ್ದಾರೆ. ಆದರೆ, ಮತ್ತೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಮನೆಯಲ್ಲಿದ್ದ ಲಟ್ಟಣಿಗೆಯಲ್ಲಿ ಪುತ್ರ ಗಹನ್ ತಂದೆಗೆ ಹಿಗ್ಗಾಮುಗ್ಗಾ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಕೊನೆಗೆ ತೀವ್ರ ರಕ್ತಸ್ರಾವದಿಂದಾಗಿ ಚೌಡಪ್ಪ ಸಾವನ್ನಪ್ಪಿದ್ದ.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇದು ಕೊಲೆ ಅಂತಾ ಸಾಬೀತಾಗಿದೆ. ಹಾಗಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಗಹನ್ ಕೈಗೆ ಕೋಳ ತೊಡಿಸಿದ್ದಾರೆ.