ಆನೇಕಲ್: ಇಲ್ಲಿನ ಉಪವಿಭಾಗದ ಜಿಗಣಿ ಪೊಲೀಸ್ ಠಾಣೆಯ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿ ಇಂದು ಸಾವಿಗೀಡಾಗಿದ್ದಾರೆ. ಜಿಗಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಕವಿತಾ ಎಂಬುವರ ಪತಿ ರಿತೀಶ್ (39) ಆತ್ಮಹತ್ಯೆ ಮಾಡಿಕೊಂಡವರು. ಆಸ್ಪತ್ರೆ ಬಳಿ ನಿನ್ನೆ ರಿತೀಶ್ ಬಂದು ಹೆಂಡತಿ ಕವಿತಾರೊಂದಿಗೆ ಜಗಳ ತೆಗೆದು ರಂಪಾಟ ಮಾಡಿದ್ದರು. ಆ ಸಂದರ್ಭದಲ್ಲಿ ಆಕೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು.
ಪತ್ನಿಯ ಹಿಂದೆ ಬಿದ್ದ ಪತಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಪೊಲೀಸ್ ಠಾಣೆಯೆದುರಿನ ರಸ್ತೆಯಲ್ಲಿಯೇ ರಿತೀಶ್ ಬೆಂಕಿ ಹಚ್ಚಿಕೊಂಡಿದ್ದರು. ಠಾಣೆಯಲ್ಲಿದ್ದ ಸಿಬ್ಬಂದಿ ಕೊರತೆಯ ನಡುವೆಯೂ ಬೆಂಕಿ ನಂದಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳೆದ ರಾತ್ರಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ.