ಬೆಂಗಳೂರು: ಮಳೆಗಾಲದ ಸಂದರ್ಭದಲ್ಲಿ ಮರ ಬಿದ್ದು ಮೃತಪಟ್ಟಿದ್ದ ವ್ಯಕ್ತಿಯ ಕುಟುಂಬವೊಂದು ಪಾಲಿಕೆಯ 1 ಲಕ್ಷ ರೂಪಾಯಿ ಪರಿಹಾರ ಪಡೆಯಲು ಆರು ವರ್ಷಗಳಿಂದ ಅಲೆದಾಡುತ್ತಿದೆ. ನಗರದಲ್ಲಿ ಶಾಲೆಗಳಿಗೆ ಮಧ್ಯಾಹ್ನದ ಊಟವನ್ನು ಪೂರೈಸುವ ಕೆಲಸ ಮಾಡುತ್ತಿದ್ದ 48 ವರ್ಷದ ಫಿರೋಜ್, 2016ನೇ ಸಾಲಿನ ಜೂನ್ 27ರಂದು ಮರ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಅಂದಿನ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದರು.
ಫಿರೋಜ್ ಪುತ್ರ ಹೇಳೋದೇನು?:ಈ ಪರಿಹಾರ ಧನ ಇದುವರೆಗೆ ಸಂತ್ರಸ್ತ ಕುಟುಂಬದ ಕೈಸೇರಿಲ್ಲವಂತೆ. ಈ ಕುರಿತು ಪ್ರತಿಕ್ರಿಯಿಸಿರುವ ಮೃತ ಫಿರೋಜ್ ಅವರ ಪುತ್ರ ಮಹಮ್ಮದ್ ಸಲ್ಮಾನ್, ನಮ್ಮ ತಂದೆ ಕುಟುಂಬದ ಆಧಾರ ಸ್ತಂಭವಾಗಿದ್ದರು. ಅವರ ಆಗಲಿಕೆ ಬಳಿಕ ನನ್ನ ತಾಯಿ ಅರ್ಬೈನ್ ತಾಜ್ (45) ಸಹ ಕಳೆದ ವರ್ಷ ಕೋವಿಡ್ 2 ನೇ ಅಲೆಯ ಸಮಯದಲ್ಲಿ ಮೃತಪಟ್ಟರು. ಪರಿಹಾರದ ಅರ್ಜಿ ಪಡೆಯಲು ಬಿಬಿಎಂಪಿ ಕಚೇರಿಗೆ ಹಲವಾರು ಬಾರಿ ಓಡಾಟ ನಡೆಸಿದರೂ, ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆಯುಕ್ತರ ನಿರ್ದೇಶನವನ್ನು ಕೆಳಹಂತದ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.