ಬೆಂಗಳೂರು:ಅನಾರೋಗ್ಯದಿಂದ ಮೃತಪಟ್ಟ ಮಾವನ ಅಂತಿಮ ದರ್ಶನ ಮಾಡಲು ಸ್ಕೂಟರ್ನಲ್ಲಿ ಹೋಗುವಾಗಲೇ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ರಾಜಧಾನಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೃತ ಸಂಬಂಧಿಯನ್ನು ನೋಡಲು ಹೋಗಿ ಮೃತನಾದ ಯುವಕ..! - Road Accident at Bangalore
ಮೃತ ಸಂಬಂಧಿಯ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿದ್ದಾನೆ.
21 ವರ್ಷದ ಮಹೇಶ್ ಮೃತ ದುದೈರ್ವಿ. ನಗರದ ಅರಕೆರೆ ನಿವಾಸಿಯಾಗಿರುವ ಮಹೇಶ್, ಖಾಸಗಿ ಕಂಪೆನಿಯಲ್ಲಿ ಫೀಲ್ಡ್ ವರ್ಕ್ ಕೆಲಸ ಮಾಡುತ್ತಿದ್ದ. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ ಈತ ಮೊನ್ನೆ (ಜುಲೈ 23) ರಾತ್ರಿ ಮನೆಯಲ್ಲಿರುವಾಗ ನೆಲಮಂಗಲದಲ್ಲಿ ವಾಸವಾಗಿದ್ದ ಮಾವ ಅನಾರೋಗ್ಯದಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಕೊನೆ ಬಾರಿ ಮುಖ ನೋಡಲು ಅರಕರೆ ನಿವಾಸದಿಂದ ನೆಲಮಂಗಲಕ್ಕೆ ಮಳೆ ನಡುವೆಯೂ ಹೊಂಡಾ ಆಕ್ಟೀವಾದಲ್ಲಿ ಪ್ರಯಾಣ ಬೆಳೆಸಿದ್ದಾನೆ. ಸುಮಾರು ರಾತ್ರಿ 10 ಗಂಟೆ ವೇಳೆ ನೈಸ್ ರಸ್ತೆಯ ಚಕರ್ ನಗರದ ಬ್ರಿಡ್ಜ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ.
ಅಪಘಾತ ರಭಸಕ್ಕೆ ಹೊಂಡಾ ಆಕ್ಟೀವಾ ಗಾಡಿ ಸಂಪೂರ್ಣ ಹಾನಿಯಾಗಿದೆ. ನೈಸ್ ರಸ್ತೆಯಾಗಿರುವುದರಿಂದ ಜನ ಸಂಚಾರ ವಿರಳವಾಗಿದ್ದು, ಅಪಘಾತವಾಗಿ ಕೆಲ ಹೊತ್ತಾದರೂ ಯಾರಿಗೂ ಗೊತ್ತಾಗಿಲ್ಲ. ಅದೇ ರಸ್ತೆಯಲ್ಲಿರುವ ಪೆಟ್ರೋಲಿಂಗ್ ನಡೆಸುತ್ತಿದ್ದ ವಾಹನ ಸಿಬ್ಬಂದಿ ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.