ಬೆಂಗಳೂರು: ಜ್ಯೂವೆಲ್ಲರಿ ಶಾಪ್ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಗುರುವಾರ ನಡೆದಿದೆ. ಮಹಾರಾಷ್ಟ್ರ ಮೂಲದ ವಿಷ್ಣು ಸಾವಂತ್ ಮೃತ ವ್ಯಕ್ತಿ. ಇವರ ಪತ್ನಿ ವೈಜಯಂತಿ ಎಂಬವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಾಹ್ನ ಅವಘಡ ಸಂಭವಿಸಿದೆ. ಅಂಬಿಕಾ ರಿಫೈನರಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರ ಸೋನಿ ಎಂಬವರು ನೀಡಿದ ದೂರಿನ ಮೇರೆಗೆ ಶಾಪ್ ಮಾಲೀಕರಾದ ರಮೇಶ್ ಕೊಠಾರಿ, ಮಹೇಶ್ ಕೊಠಾರಿ, ಕಟ್ಟಡ ಮಾಲೀಕರು ಸೇರಿ ಒಟ್ಟು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳೆದೊಂದು ವರ್ಷಗಳಿಂದ ನಗರ್ತಪೇಟೆಯ ಅಂಬಿಕಾ ರಿಫೈನರಿ ಶಾಪ್ನಲ್ಲಿ ದಂಪತಿ ಚಿನ್ನಾಭರಣ ಕರಗಿಸುವ ಕೆಲಸ ಮಾಡಿಕೊಂಡು ಬಾಡಿಗೆ ಮನೆವೊಂದರಲ್ಲಿ ವಾಸವಾಗಿದ್ದರು. ನಿನ್ನೆ ಮಧ್ಯಾಹ್ನ ಹೆಂಡತಿ ಊಟದ ಬಾಕ್ಸ್ ತೆಗೆದುಕೊಂಡು ಬಂದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಪಕ್ಕದಲ್ಲೇ ಇದ್ದ ದಂಪತಿ ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ವಿಷ್ಣು ಸಾವನ್ನಪ್ಪಿದ್ದಾರೆ. ಪತ್ನಿಗೆ ಸುಟ್ಟ ಗಾಯವಾಗಿರುವುದರಿಂದ ಚಿಕಿತ್ಸೆ ಪಡೆಯುತ್ತಿರುವುದಾಗಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.
ಚಿನ್ನ ಕರಗಿಸಲು ಎಲ್ಪಿಜಿ ಸಿಲಿಂಡರ್ ಜೊತೆ ಆಕ್ಸಿಜನ್ ಸಿಲಿಂಡರ್ ಬಳಸುತ್ತಾರೆ. ನಿನ್ನೆ ಸಿಲಿಂಡರ್ ಬಳಸಿ ಕೆಲಸ ಮಾಡುವಾಗ ದುರಂತ ಸಂಭವಿಸಿದೆ. ಆಕ್ಸಿಜನ್ ಸಿಲಿಂಡರ್ ಬಳಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಲಾಗಿದೆಯೇ? ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.