ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿರುವ ಘಟನೆ ಜೆಡಿಎಸ್ ಕಚೇರಿ ಎದುರು ನಡೆದಿದೆ. KA 57 F4762 ನಂಬರಿನ ಬಸ್ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಹರಿದಿದೆ. ಮೃತನ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ, ಚಾಲಕ ಮಹಾಂತ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ಸಾಲ ಮರಳಿ ಕೇಳಿದ್ದಕ್ಕೆ ಫೈನಾನ್ಶಿಯರ್ ಹತ್ಯೆಗೈದಿದ್ದ ಆರೋಪಿಗಳ ಬಂಧನ:ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಫೈನಾನ್ಶಿಯರ್ ಗೆ ಚಾಕು ಇರಿದು ಹತ್ಯೆ ಮಾಡಿದ್ದ ಆರೋಪಿಗಳನ್ನ ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಹಾಗೂ ಕವೀಶ್ ಬಂಧಿತ ಆರೋಪಿಗಳು ಎಂಬುದು ತಿಳಿದು ಬಂದಿದೆ. ಫೆಬ್ರವರಿ 7ರಂದು ರಾತ್ರಿ ಬಾಣಸವಾಡಿ ಠಾಣಾ ವ್ಯಾಪ್ತಿಯ ಚಿಕ್ಕ ಬಾಣಸವಾಡಿ ಬಳಿ ಶೇಖರ್ (29) ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.
ಹಣ ಮರಳಿ ಕೊಡದಿರುವುದಾಗಿ ಶೇಖರ್ ಬಳಿ ಮನೋಜ್ ಗಲಾಟೆ: ಬಾಣಸವಾಡಿ ಸುತ್ತಮುತ್ತ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಶೇಖರ್ ಈ ಹಿಂದೆ ಮನೋಜ್ಗೆ 90 ಸಾವಿರ ರೂ ಸಾಲ ನೀಡಿದ್ದ. ಫೆಬ್ರವರಿ 7ರಂದು ಕುಡಿದ ಅಮಲಿನಲ್ಲಿದ್ದ ಶೇಖರ್, ಮನೋಜ್ಗೆ ಅವಾಚ್ಯವಾಗಿ ನಿಂದಿಸಿ ಕೊಟ್ಟ ಹಣ ವಾಪಸ್ ಕೊಡುವಂತೆ ಶೇಖರ್ ಕೇಳಿದ್ದ. ಆಗ ಸಿಟ್ಟಿಗೆದ್ದು ಸ್ನೇಹಿತ ಕವೀಶ್ ಜೊತೆ ಬಂದಿದ್ದ ಮನೋಜ್ 'ಸಾಲ ವಾಪಸ್ ಕೊಡಲ್ಲ, ಏನ್ ಮಾಡ್ಕೊತಿಯೋ ಮಾಡ್ಕೋ' ಎಂದು ಶೇಖರ್ ಬಳಿ ಗಲಾಟೆ ಆರಂಭಿಸಿದ್ದ.
ಇದನ್ನೂ ಓದಿ :ಮಂಡ್ಯದಲ್ಲಿ ಸಾರ್ವಜನಿಕರ ಬಳಿ ಹಣ ವಸೂಲಿ ಮಾಡ್ತಿದ್ದ ನಕಲಿ ಪೊಲೀಸ್ ಬಂಧನ
ಶೇಖರ್ ಹೊಟ್ಟೆಯ ಭಾಗಕ್ಕೆ ಚಾಕು ಇರಿತ: ಈ ವೇಳೆ, ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದಾಗ ಮನೋಜ್ ಹಾಗೂ ಆತನ ಸ್ನೇಹಿತ ಕವೀಶ್ ಶೇಖರ್ನ ಹೊಟ್ಟೆ ಭಾಗಕ್ಕೆ ಮೂರ್ನಾಲ್ಕು ಕಡೆಗಳಲ್ಲಿ ಚಾಕು ಇರಿದಿದ್ದರು. ತೀವ್ರ ರಕ್ತಸ್ರಾವದಿಂದ ಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಾಣಸವಾಡಿ ಠಾಣಾ ಪೊಲೀಸರು ಆರೋಪಿ ಮನೋಜ್ ಹಾಗೂ ಆತನ ಸ್ನೇಹಿತ ಕವೀಶ್ ನನ್ನ ಬಂಧಿಸಿದ್ದಾರೆ.