ಬೆಂಗಳೂರು: ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಿನ್ನೆ ರಾತ್ರಿ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೋಣನಕುಂಟೆಯಲ್ಲಿ ವಾಸವಾಗಿದ್ದ ನಾಗೇಂದ್ರ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಂಡ್ತಿ ವಿಜಯಲಕ್ಷ್ಮಿ (28) ಮಕ್ಕಳಾದ ನಿಷಾ (7) ಹಾಗೂ ದೀಕ್ಷಾ (5) ಸಾವನ್ನಪ್ಪಿದ ದುದೈರ್ವಿಗಳು. ಊಟದಲ್ಲಿ ವಿಷ ಹಾಕಿ ಬಳಿಕ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಅಷ್ಟೊತ್ತಿಗಾಗಲೇ ಹೆಂಡ್ತಿ ಸಹೋದರ ಬಂದು ಅವರನ್ನು ರಕ್ಷಣೆ ಮಾಡಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ ಕ್ಯಾನ್ಸರ್ನಿಂದ ಬಳಲುತ್ತಿದ್ದ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಹೀಗಾಗಿ ಸಂಸಾರದ ನೌಕೆ ಮುನ್ನೆಡಸಲು ಕಷ್ಟವಾಗಿತ್ತು. ಹೆಂಡ್ತಿ ಕೆಲಸಕ್ಕೆ ಹೋಗಿ ಕುಟುಂಬದ ನಿರ್ವಹಣೆ ನಡೆಸುತ್ತಿದ್ದರು. ಈ ಮಧ್ಯೆ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದೆ. ಇದರಿಂದ ಮನನೊಂದಿದ್ದ ನಾಗೇಂದ್ರ, ಹೆಂಡ್ತಿ ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ತಿನ್ನಿಸಿ ಸಾವಿಗೆ ಕಾರಣನಾಗಿದ್ದಾನೆ. ಕೃತ್ಯವೆಸಗಿದ ಬಳಿಕ ಡೋರ್ ಲಾಕ್ ಮಾಡಿಕೊಂಡು ಚಾಕುವಿನಿಂದ ಕೈಕುಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ. ಅಷ್ಟೊತ್ತಿಗಾಗಲೇ ಹೆಂಡತಿ ಸಹೋದರ ಬಂದು ರಕ್ಷಣೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಡ್ಡರಪಾಳ್ಯದಲ್ಲಿ ನಿವಾಸಿಯಾಗಿದ್ದ ನಾಗೇಂದ್ರ - ವಿಜಯಾ ದಂಪತಿಗೆ 2014 ರಲ್ಲಿ ಮದುವೆಯಾಗಿತ್ತು. ಇಬ್ಬರಿಗೆ ಮುದ್ದಾದ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ನಂತರ ಅವರನ್ನು ಸರ್ಕಾರಿ ಶಾಲೆಗೆ ಸೇರಿಸಲಾಗಿತ್ತು. ಹಲವು ವರ್ಷಗಳ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ನಾಗೇಂದ್ರ ಕುಡಿತದ ದಾಸನಾಗಿದ್ದ.