ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಬೆಂಗಳೂರು :ಕಾರು ಚಾಲಕನೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರೀನ್ ವ್ಯೂ ಅಪಾರ್ಟ್ಮೆಂಟ್ ಟೆರೇಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಮೂಲದ ಜೊಮೊನ್ ವರ್ಗಿಸ್ ಆತ್ಮಹತ್ಯೆಗೆ ಶರಣಾದವರು.
ಕಳೆದೊಂದು ವರ್ಷದಿಂದ ಮನೆ ಮಾಲೀಕರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಉಳಿದುಕೊಳ್ಳಲು ಮಾಲೀಕೆ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದರು. ಸ್ವಂತ ಮನೆಯ ನವೀಕರಣ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮನೆ ಶಿಫ್ಟ್ ಮಾಡಿದ್ದರು. ಈ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣವಿರುವ ಲಾಕರ್ ಕೀಯನ್ನು ವರ್ಗೀಸ್ಗೆ ಕೊಟ್ಟಿದ್ದರು. ಇತ್ತೀಚೆಗೆ ಲಾಕರ್ ತೆಗೆದು ನೋಡಿದಾಗ ಆಭರಣಗಳು ನಾಪತ್ತೆಯಾಗಿದ್ದವು. ಈ ಸಂಬಂಧ ಮಾಲೀಕೆ ಪುಲಕೇಶಿನಗರ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರು ಚಾಲಕ ವರ್ಗೀಸ್ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ತನಿಖೆಯಲ್ಲಿ ಚಾಲಕನೇ ಕಳ್ಳತನ ಮಾಡಿರುವ ಬಗ್ಗೆ ಪೂರಕ ಸಾಕ್ಷ್ಯಾಧಾರಗಳು ಸಿಗದ ಪರಿಣಾಮ ಬಿಟ್ಟುಕಳುಹಿಸಿದ್ದರು. ಆದರೆ, ತಾನು ವಾಸವಿದ್ದ ಅಪಾರ್ಟ್ಮೆಂಟ್ ಟೆರೇಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಮಲಯಾಳಂನಲ್ಲಿ ಡೆತ್ ನೋಟ್ ಬರೆದಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿದ್ದು, ''ಇಂದು ಬೆಳಗಿನ ಜಾವ ಪುಲಕೇಶಿನಗರ ಠಾಣೆಯ ಪೊಲೀಸರಿಗೆ ಆತ್ಮಹತ್ಯೆ ಘಟನೆಯ ಮಾಹಿತಿ ಸಿಕ್ಕಿತ್ತು. ಗ್ರೀನ್ ಅವೆನ್ಯೂ ಅಪಾರ್ಟ್ಮೆಂಟ್ ಟೆರೇಸ್ನಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ತಿಳಿದುಬಂತು. ಅಲ್ಲಿಗೆ ನಮ್ಮ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಹೆಸರು ಮತ್ತು ವಿಳಾಸ ತಿಳಿದು ಬಂದಿತು. ಇವರು ಮೂಲತಃ ಕೇರಳದವರು. ಕಳೆದೊಂದು ವರ್ಷದಿಂದ ಮನೆ ಮಾಲೀಕರ ಕಾರಿನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯಕ್ಕೆ ನಮಗೆ ಆತ್ಮಹತ್ಯೆಗೆ ಸೂಕ್ತ ಕಾರಣಗಳು ಗೊತ್ತಾಗುತ್ತಿಲ್ಲ. ಆದರೆ, ಆತನ ಬಳಿ ಮಾಲಯಾಳಂನಲ್ಲಿ ಬರೆದಿರುವ ಒಂದು ಪೇಪರ್ ಸಿಕ್ಕಿದೆ. ಅದನ್ನು ನಾವು ಸಂಬಂಧಪಟ್ಟ ಭಾಷಾ ಶಾಸ್ತ್ರಜ್ಞರಿಂದ ಅನುವಾದಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ'' ಎಂದು ಮಾಹಿತಿ ನೀಡಿದರು.
ಅಣ್ಣನಿಂದ ಕಿರುಕುಳ- ಸಹೋದರ ಆತ್ಮಹತ್ಯೆ : ಮನೆ ಕಟ್ಟುವ ವಿಚಾರಕ್ಕೆ ಅಣ್ಣ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಸಹೋದರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ (ನವೆಂಬರ್ 5-2029) ನಡೆದಿತ್ತು.
ಸಯ್ಯದ್ ಖಲೀಲ್ (44) ಮೃತಪಟ್ಟ ದುರ್ದೈವಿ. ಈತ ಜಿಲ್ಲೆಯ ಸಕಲೇಶಪುರ ಪಟ್ಟಣದ ಚಂಪಕನಗರ ಬಡಾವಣೆಯ ನಿವಾಸಿ. ಬಡಾವಣೆಯ ಪ್ಯಾರೇಜಾನ್ ಎಂಬವರ ದ್ವಿತೀಯ ಪುತ್ರ ಖಲೀಲ್ ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದರು. ಮಗನ ಕಷ್ಟವನ್ನು ನೋಡಲಾರದೆ ತಂದೆ ಈತನಿಗೆ ಮನೆ ಕಟ್ಟಲು ಕೊಂಚ ಆರ್ಥಿಕವಾಗಿ ನೆರವು ನೀಡುತ್ತಿದ್ದರು. ಹಿರಿಯ ಮಗನಿಗೆ ಸಹಾಯ ಮಾಡದ ತಂದೆ, ತಮ್ಮನಿಗೆ ನೀಡುತ್ತಾರಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಖಲೀಲ್ ಮನೆ ಕಟ್ಟುವ ವಿಚಾರಕ್ಕೆ ಸುಖಾಸುಮ್ಮನೆ ಅಣ್ಣ ಸಯ್ಯದ್ ಜಹೀರ್ ಕ್ಯಾತೆ ತೆಗೆದು ಖಲೀಲ್‌ಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿತ್ತು.
ಇದನ್ನೂ ಓದಿ:ಮನೆ ಕಟ್ಟುವ ವಿಚಾರಕ್ಕೆ ಅಣ್ಣನಿಂದ ಕಿರುಕುಳ: ಸಹೋದರ ಆತ್ಮಹತ್ಯೆ