ಬೆಂಗಳೂರು :ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೇಂದ್ರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲೇ ಕಾರ್ಮಿಕರೊಬ್ಬರನ್ನು ಮಲದ ಗುಂಡಿಗೆ ಇಳಿಸಿ ಕೆಲಸ ಮಾಡಿಸಿರುವ ಅಮಾನವೀಯ ಘಟನೆ ಶಿವಾಜಿನಗರದ ಇನ್ಫೆಂಟ್ರಿ ರಸ್ತೆಯಲ್ಲಿ ನಡೆದಿದೆ.
ಅಕ್ಟೋಬರ್ 11ರಂದು ಈ ಘಟನೆ ನಡೆದಿದೆ. ಸಾಮಾಜಿಕ ಹೋರಾಟಗಾರರಾದ ವಿನಯ್ ಶ್ರೀನಿವಾಸ್ ಹಾಗೂ ಸ್ವಾತಿ ಶಿವಾನಂದ್ ಈ ಬಗ್ಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕ.. ಸ್ಮಾರ್ಟ್ ಸಿಟಿ ಯೋಜನೆಯ ಅಮೃತ್ ಕನ್‌ಸ್ಟ್ರಕ್ಷನ್ಸ್ ಗುತ್ತಿಗೆದಾರರು ಕೆಲಸದ ಕಾರ್ಮಿಕರೊಬ್ಬರನ್ನು ಸೂಕ್ತ ಸ್ವಚ್ಛತಾ ಪರಿಕರಗಳೂ ಇಲ್ಲದೇ ಮ್ಯಾನ್‌ಹೋಲ್ ಚರಂಡಿಗೆ ಇಳಿಸಿದ್ದಾರೆ. ಅಲ್ಲದೇ ತ್ಯಾಜ್ಯ ಹೊರ ಹಾಕಿ ಸ್ವಚ್ಛತಾ ಕಾರ್ಯಕ್ಕೆ ಬಳಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಖಂಡಿಸಿ ಶ್ರೀನಿವಾಸ್ ಅವರು ಪೋಸ್ಟ್ ಹಾಕಿದ್ದಾರೆ.
ಅಲ್ಲದೇ ಈ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದಾಗ ಧಮ್ಕಿ ಹಾಕಿದರು. ಮ್ಯಾನ್ಹೋಲ್ನಲ್ಲಿ ಚರಂಡಿ ನೀರು ಬಿಟ್ಟೇ ಇಲ್ಲ ಎಂದು ವಾದಿಸಿದ್ದಾರೆ. ಆದರೆ, ಇದೇ ಚರಂಡಿ ಗುಂಡಿಯಿಂದ 50 ಮೀಟರ್ ದೂರದಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಮತ್ತೊಂದು ಪಿಟ್ನಲ್ಲಿ ಚರಂಡಿ ನೀರು ಉಕ್ಕಿ ಹರಿಯುತ್ತಿತ್ತು. ಮಳೆನೀರು ಹೊರ ಹಾಕುತ್ತಿರುವುದಾಗಿ ಹೇಳಿದ್ದರೂ, ಪಕ್ಕದ ಅಪಾರ್ಟ್ ಮೆಂಟ್ ಚರಂಡಿ ಬ್ಲಾಕ್ ಆಗಿರುವ ಬಗ್ಗೆ ತಿಳಿಸಿದೆ. ಹೀಗಾಗಿ, ಈ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲೂ ಖಂಡನೆ ರಾಜಧಾನಿಯಲ್ಲೇ ಇನ್ನೂ ಮಲಹೊರುವ ಪದ್ಧತಿ ಜೀವಂತವಾಗಿರುವುದು, ಪೌರಕಾರ್ಮಿಕರಿಗೆ ಗೌರವದ ಜೀವನ ಒದಗಿಸಲು ಸಾಧ್ಯವಾಗದಿರುವುದು ಆಡಳಿತ ಸರ್ಕಾರದ ವೈಫಲ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.