ಬೆಂಗಳೂರು :ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಗೆ ಅಲ್ಲಿನ ಧರ್ಮದರ್ಶಿ ಹಿಗ್ಗಾಮುಗ್ಗಾ ಥಳಿಸಿರುವ ಪ್ರಕರಣ ಡಿಸೆಂಬರ್ 21ರಂದು ಅಮೃತಹಳ್ಳಿಯಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದ ಗೃಹಿಣಿಯ ಮೇಲೆ ದೇವಸ್ಥಾನದ ಧರ್ಮದರ್ಶಿ ಮುನಿಕೃಷ್ಣಪ್ಪ ಎಂಬವರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎನ್ನಲಾದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆಯ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಪೊಲೀಸರಿಗೆ ದೂರು ನೀಡಿದ ಸಂತ್ರಸ್ತ ಮಹಿಳೆ: 'ನಾನು ಗೃಹಿಣಿ. ಗಂಡ ಮತ್ತು ಎರಡು ಗಂಡು ಮಕ್ಕಳ ಜೊತೆ ಅಮೃತಹಳ್ಳಿ ನಗರದಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿನ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ಮುನಿಕೃಷ್ಣಪ್ಪ ಎಂಬವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಸ್ನಾನ ಮಾಡದೇ, ಶುದ್ಧಿ ಇಲ್ಲದೇ ದೇವಸ್ಥಾನಕ್ಕೆ ಬರುತ್ತೀರಾ. ನಿನಗೆ ಇಲ್ಲಿ ದರ್ಶನ ಮಾಡಲು ಅವಕಾಶ ಕಲ್ಪಿಸುವುದಿಲ್ಲ. ನೀನು ಕಪ್ಪಾಗಿ, ವಿಚಿತ್ರವಾಗಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ಮುನಿಕೃಷ್ಣಪ್ಪನವರು ಮನಸ್ಸಿಗೆ ಬಂದ ಹಾಗೆ ನನ್ನನ್ನು ಥಳಿಸಿದರು. ಹಲ್ಲೆ ಮಾಡಿದ ಬಳಿಕ ದೇವಸ್ಥಾನದೊಳಗಿನಿಂದ ಧರಧರನೆ ಎಳೆದುಕೊಂಡು ಹೊರ ಹಾಕಿದ್ದಾರೆ. ತಲೆ ಕೂದಲು ಹಿಡಿದು ಮನಸೋಇಚ್ಛೆ ಥಳಿಸಿದರು. ದೇವಸ್ಥಾನದ ಅರ್ಚಕರು ನನ್ನ ಸಹಾಯಕ್ಕೆ ಬಂದಾಗ ಮುನಿಕೃಷ್ಣಪ್ಪನವರು ಅಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಹಲ್ಲೆ ಮಾಡಿದ್ದಾರೆ. ಆ ಬಳಿಕ ನನ್ನನ್ನು ದೇವಸ್ಥಾನದಿಂದ ಹೊರ ಹಾಕಿದರು. ಇದಾದ ಮೇಲೆ, ಈ ವಿಷಯವನ್ನು ಯಾರಿಗಾದ್ರೂ ಹೇಳಿದ್ರೆ ನಿನ್ನ ಮತ್ತು ನಿನ್ನ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು' ಎಂದು ಮಹಳೆ ವಿವರಿಸಿದ್ದಾರೆ.
'ಹಣ ಬಲ ಇರುವವರಿಗೆ ಹೆದರಿ ನಾನು ಯಾರಿಗೂ ಈ ಸಂಗತಿ ಹೇಳಿರಲಿಲ್ಲ. ಈ ವಿಷಯ ನನ್ನ ಗಂಡನಿಗೆ ಗೊತ್ತಾಗಿದೆ. ನಮಗೆ ಪೊಲೀಸರು ರಕ್ಷಣೆ ನೀಡುತ್ತಾರೆ ಎಂದು ಧೈರ್ಯ ತುಂಬಿದ ಬಳಿಕ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದೇನೆ. ಗಂಡನಿಗೆ ಹಾನಿಯಾಗದಂತೆ ಮತ್ತು ನನಗೆ ನ್ಯಾಯ ಒದಗಿಸಿಕೊಡಿ' ಎಂದು ಪೊಲೀಸರಿಗೆ ಸಂತ್ರಸ್ತ ಮಹಿಳೆ ನಿನ್ನೆ ದೂರಿನ ಮೂಲಕ ಮನವಿ ಮಾಡಿದ್ದಾರೆ.