ಬೆಂಗಳೂರು: ಎಂಟಿಎಂ ಮಷಿನ್ನನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ಹಣ ದೋಚಲು ಯತ್ನಿಸಿದ ಖತರ್ನಾಕ್ ಕಳ್ಳನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ ಮೂಲದ ಸಮರ್ಜೋತ್ ಸಿಂಗ್ ಬಂಧಿತ ಆರೋಪಿ.
ಈತ ಕಳೆದ 5 ದಿನಗಳಿಂದ ಚಿಕ್ಕಸಂದ್ರದ ಕಾಲೇಜು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ದೋಚಲು ಪ್ಲ್ಯಾನ್ ಮಾಡಿದ್ದ. ರಾತ್ರಿಯಾಗುತ್ತಿದ್ದಂತೆ ಎಟಿಎಂಗೆ ನುಗ್ಗಿ ಶೆಟರ್ ಕ್ಲೋಸ್ ಮಾಡಿ ಗ್ಯಾಸ್ ಕಟ್ಟರ್ನಿಂದ ಮೆಷನ್ ಕಟ್ ಮಾಡಲು ಯತ್ನಿಸುತ್ತಿದ್ದ. ಆದರೆ, ಎಟಿಎಂ ಕಾರ್ಡ್ ರೀಡರ್ ಜಾಮ್ ಆಗುತ್ತಿತ್ತು. ಇದನ್ನು ಹಲವು ಬಾರಿ ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಆರೋಪಿ ನಾಪತ್ತೆಯಾಗುತ್ತಿದ್ದ.
ಎಟಿಎಂ ನಿರ್ವಹಣೆ ಮಾಡುವ ಏಜೆನ್ಸಿಯವರು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮತ್ತೆ ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ರೆಡ್ ಹ್ಯಾಂಡಾಗಿ ಹಿಡಿದು ಬಂಧಿಸಿದ್ದಾರೆ. ಸದ್ಯ ಈತನಿಂದ 5 ಕೆಜಿ ತೂಕದ ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟರ್, ಮಾಸ್ಕ್, ಕತ್ತಿ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ ಆರೋಪಿ ಸುಬ್ರಹ್ಮಣ್ಯಪುರ, ಮೈಕೋಲೇಔಟ್ ಸೇರಿ ಹಲವು ಕಡೆ ಕಳ್ಳತನ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಕಳೆದ ವರ್ಷ ಡಿಸೆಂಬರ್ನಲ್ಲಿ ಜಾಮೀನು ಪಡೆದು ಹೊರಬಂದು ಮತ್ತದೇ ಕೆಲಸವನ್ನು ಮುಂದುವರಿಸಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಜಾತಿನಿಂದನೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ