ಬೆಂಗಳೂರು: ಮಾದಕ ವಸ್ತು ಸರಬರಾಜು ಆರೋಪದಡಿ ವ್ಯಕ್ತಿಯನ್ನು ಬಂಧಿಸಿದ್ದ ಪೊಲೀಸರ ಕ್ರಮ ಎತ್ತಿಹಿಡಿರುವ ಹೈಕೋರ್ಟ್, ಈ ಕುರಿತು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಇದೇ ವೇಳೆ ಮಾದಕ ವಸ್ತುಗಳ ಅಕ್ರಮ ಸಾಗಾಟ ತಡೆ ಕಾಯ್ದೆ-1988ರ ಅಡಿಯಲ್ಲಿ ಬಂಧಿತನಾಗಿರುವ ವ್ಯಕ್ತಿ ಬಿಡುಗಡೆಗೊಳಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂಬುದನ್ನು ತಿಳಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಬಾಧ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.
ಡ್ರಗ್ ಪೆಡ್ಲಿಂಗ್ ಆರೋಪದಡಿ ಬಂಧಿತರಾಗಿರುವ ಬೆಂಗಳೂರಿನ ಮೊಹಮ್ಮದ್ ಕಾಶಿಫ್ ಎಂಬುವರ ಪತ್ನಿ ಖತೇಜುತಲ್ ನಜ್ಮಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿದ ನ್ಯಾ. ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಮಾದಕ ವಸ್ತುಗಳ ಅಕ್ರಮ ಸಾಗಾಟ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿದಾಗ ಆ ಕುರಿತು ಮೇಲ್ವಿಚಾರಣೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದರೆ, ಬಂಧನದ ಆದೇಶ ಮತ್ತು ಬಂಧನಕ್ಕೆ ಆಧಾರಗಳನ್ನು ಒಳಗೊಂಡ ವರದಿ ಸ್ವೀಕರಿಸಿದ ನಂತರವೇ ಈ ಅಧಿಕಾರ ಚಲಾಯಿಸಬಹುದು ಎಂದು ಸ್ಪಷ್ಟಪಡಿಸಿದೆ.
ಹಾಗೆಯೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಾಧಿಕಾರ, ಸರ್ಕಾರ ಮತ್ತು ಸಲಹಾ ಮಂಡಳಿಗೆ ಮನವಿ ನೀಡುವ ಹಕ್ಕಿನ ಕುರಿತು ಬಂಧಿತನಿಗೆ ತಿಳಿಸಲಾಗಿದೆ. ಹೀಗಾಗಿ ಬಂಧನ ಆದೇಶ ಮತ್ತು ಬಂಧನ ಮಾಡಿರುವ ಕ್ರಮಗಳಲ್ಲಿ ಯಾವುದೇ ಲೋಪವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.