ಬೆಂಗಳೂರು:ಅಕ್ರಮವಾಗಿ ಜಿಂಕೆ ಕೊಂಬು, ಆನೆ ದಂತ ಮತ್ತು ನಾಡ ಬಂದೂಕು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ದಕ್ಷಿಣ ವಿಭಾಗದ ಸಿ.ಕೆ. ಅಚ್ಚುಕಟ್ಟು ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮನಗರ ಮೂಲದ ಮಲ್ಲೇಶ್ ಬಂಧಿತ ಆರೋಪಿ. ಈತ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಮ್ಮ ದೇವಸ್ಥಾನದ ಬಳಿ ಗೋಣಿ ಚೀಲದಲ್ಲಿ ಜಿಂಕೆ ಕೊಂಬು, ಆನೆ ದಂತ ಮತ್ತು ನಾಡಬಂದೂಕನ್ನ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಬಳಿಕ ಸ್ವತ್ತುಗಳು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮಲ್ಲೇಶ್ ತನ್ನ ಮನೆಯಲ್ಲಿದ್ದ ನಾಡ ಬಂದೂಕಿನಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸ, ಚರ್ಮ, ಕೊಂಬುಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದ. ಈಗಾಗಲೇ ಒಂದು ಕೊಂಬನ್ನು ಮಾರಾಟ ಮಾಡಿ ಉಳಿದ 5 ಕೊಂಬುಗಳನ್ನು ಮಾರಲು ನಗರಕ್ಕೆ ಆಗಮಿಸಿದ್ದ ಎನ್ನಲಾಗ್ತಿದೆ.
ಕೋವಿಡ್-19 ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಮಲ್ಲೇಶ್, ಹಣಕ್ಕಾಗಿ ಈ ರೀತಿ ಕೆಲಸ ಮಾಡಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಬಂಧಿತ ಆರೋಪಿಯಿಂದ 5 ಜಿಂಕೆ ಕೊಂಬು, ಆನೆ ದಂತ, ಸಿಂಗಲ್ ಬ್ಯಾರಲ್ ನಾಡಬಂದೂಕು ವಶಪಡಿಸಿಕೊಳ್ಳಲಾಗಿದೆ. 1972 ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.